ಶನಿವಾರ, ಜೂನ್ 3, 2023

ತೋಟಗಾರಿಕೆ ಇಲಾಖೆಯಿಂದ ಮೆಣಸಿನಕಾಯಿ ಬೆಳೆ ಬೆಳೆಯುವ ರೈತರಿಗೆ ಪ್ರಮುಖ ಸಲಹೆಗಳು ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಪ್ರಸ್ತಕ ಸಾಲಿನ ಹಂಗಾಮಿನಲ್ಲಿ ಅತೀ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಪ್ರದೇಶ ಬಿತ್ತನೆಯಾಗುವ ಸಂಭವವಿದ್ದು, ದರ ಕಡಿಮೆಯಾಗಿ ಆದಾಯ ಕಡಿಮೆಯಾಗುವುದನ್ನು ತಪ್ಪಿಸಲು ಬೇಸಾಯದ ಖರ್ಚನ್ನು ಕಡಿಮೆ ಮಾಡುವುದು ಸೂಕ್ತ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎಸ್‍ಪಿ ಭೋಗಿ ಅವರು ಮೆಣಸಿನಕಾಯಿ ಬೆಳೆ ಬೆಳೆಯುವ ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. 2022 ವರ್ಷದಲ್ಲಿ ಒಣಮೆಣಸಿನಕಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದ ಪ್ರಯುಕ್ತ ಈ ವರ್ಷವು ಅತೀ ಹೆಚ್ಚಿನ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವ ಸಂಭವವಿದೆ. ಇತ್ತಿಚಿನ ದಿನಗಳಲ್ಲಿ ಕೆಲವು ಬ್ಯಾಡಗಿ ಲೈನ್‍ನ ಹೈಬ್ರಿಡ್ ತಳಿಗಳ ಬೀಜಗಳು ತುಂಬಾ ದುಬಾರಿಯಾಗಿದ್ದು, ಅವುಗಳನ್ನು ಉಪಯೋಗಿಸಿ ಬೆಳೆ ಬೆಳೆಯುವ ಬದಲು, ಬೆಳೆಯಲು ಇಚ್ಛಿಸಿದ ಪ್ರದೇಶ ಶೇ.25 ರಷ್ಟು ಹೈಬ್ರಿಡ್ ಬೀಜಗಳನ್ನು ಉಪಯೋಗಿಸುವುದು ಹಾಗೂ ಇನ್ನುಳಿದ ಪ್ರದೇಶಗಳಲ್ಲಿ ಶೇ.75 ರಷ್ಟು ಲೂಸ್ ಬ್ಯಾಡಗಿ ತಳಿಯ ಬೀಜಗಳನ್ನು ಉಪಯೋಗಿಸಿವುದು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ. ಬಿತ್ತನೆ ಮಾಡುವುದಕ್ಕಿಂತ ಮುಂಚಿತವಾಗಿ ಭೂಮಿಯನ್ನು 2-3 ಬಾರಿ ಹದವಾಗಿ ಉಳುಮೆ ಮಾಡಬೇಕು. ಹೀಗೆ ಮಾಡುವುದರಿಂದ ರೋಗ ಮತ್ತು ಕೀಟಗಳನ್ನು ಹತೋಟಿಯಲ್ಲಿಡಬಹುದು. ಮೆಣಸಿನಕಾಯಿ ಬೀಜಗಳನ್ನು ಬಿತ್ತನೆ ಮಾಡುವ ಮುಂಚೆ Carbendizim ರೋಗ ನಾಶಕದಿಂದ ಉಪಚರಿಸಬೇಕು. ಮೆಣಸಿನಕಾಯಿ ಸಸಿಗಳನ್ನು ನಾಟಿ ಮಾಡಲು ಉಪಯೋಗಿಸಿದಲ್ಲಿ ಸಸಿಗಳನ್ನು ಬ್ಯಾವಿಸ್ಟಿನ್ ದ್ರಾವಣದಲ್ಲಿ ಒಂದು ನಿಮಿಷಗಳ ಕಾಲ ನೆನೆಸಿ ನಾಟಿ ಮಾಡುವುದು. ಮೆಣಸಿನಕಾಯಿ ಬೆಳಗೆ ಸೂಕ್ಷ್ಮ ನೀರಾವರಿ ಪದ್ದತಿ ಅಳವಡಿಸುವುದರಿಂದ ಒಣ ಮೆಣಸಿನಕಾಯಿಯ ಗುಣಮಟ್ಟ ಮತ್ತು ಉತ್ಪಾದನೆಯು ಸಹ ಹೆಚ್ಚಳವಾಗುತ್ತದೆ. ಈ ಪದ್ದತಿ ಅಳವಡಿಸಿಕೊಂಡ ಸಾಮಾನ್ಯ ವರ್ಗದ ರೈತರಿಗೆ ಶೇ.75 ರಷ್ಟು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ.90 ರಷ್ಟು ಸಹಾಯಧನ ಲಭ್ಯವಿರುತ್ತದೆ. ಸಿಂಜೆಂಟಾ ಕಂಪನಿಯ 5531 ಹಾಗೂ 2043 ತಳಿಗಳಿಗೆ ರೈತರಿಗೆ ವರ್ಗದಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಯಾವುದೇ ಕೊರತೆಯಾಗದಂತೆ ಹಂತ ಹಂತವಾಗಿ ಪೂರೈಸುವುದಾಗಿ ಸಿಂಜೆಂಟಾ ಕಂಪನಿಯವರು ತಿಳಿಸಿರುತ್ತಾರೆ, ಕಾರಣ ರೈತರು ಆತಂಕಪಡುವ ಅವಶ್ಯಕತೆ ಇರುವುದಿಲ್ಲ ಎಂದು ಹಿರಿಯ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. ಸಿಂಜೆಂಟಾ ಕಂಪನಿಯ ಬೀಜಗಳನ್ನು ಒಳಗೊಂಡಂತೆ ಯಾವುದೇ ಕಂಪನಿಯವರು, ಡೀಲರ್‍ಗಳು ಚಿಲ್ಲರೆ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡತಕ್ಕದ್ದಲ್ಲ, ಹಾಗೇನಾದರೂ ಮಾರಾಟ ಮಾಡಿರುವುದು ಕಂಡುಬಂದರೆ, ತೋಟಗಾರಿಕೆ ಇಲಾಖೆಗೆ ದೂರು ನೀಡಬಹುದು. ದೂರಿನನ್ವಯ ಸಂಬಂಧಿಸಿದ ಡೀಲರ್, ಕಂಪನಿಯವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸಿಂಜೆಂಟಾ ಅಥವಾ ಇನ್ನಾವುದೇ ಕಂಪನಿಯ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ಖರೀದಿಸುವ ಅಥವಾ ವಿತರಣೆ ಮಾಡುವ ಯೋಜನೆ ಇರುವುದಿಲ್ಲ. ಬೀಜ ಕಾಯ್ದೆಯನ್ವಯ ಕಂಪನಿ, ಡೀಲರ್‍ಗಳಿಂದ ಮಾರಾಟವಾಗುವ ವ್ಯವಸ್ಥೆಯ ಮೇಲೆ ನಿಗಾವಹಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಸಿಂಜೆಂಟಾ ಕಂಪನಿಯ 2043 ಬ್ಯಾಡಗಿ ಸೆಗ್ಮೆಂಟ್ ಭಾಗಶಂ ಹೋಲುವ ಮತ್ತು ಸರಿ ಸುಮಾರು ಅಷ್ಟೇ ಪ್ರಮಾಣದ ಉತ್ತಮವಾಗಿ ಇಳುವರಿಯನ್ನು ನೀಡುವ ಇತರೆ ಕಂಪನಿಯ ಹೈಬ್ರೀಡ್ ಬೀಜಗಳನ್ನು ಸಹ ರೈತರು ಬೆಳೆಯಬಹುದು. ಉದಾಹರಣೆಗೆ ಸರ್ಪನ್ ಕಂಪನಿಯ ಬೀಜಗಳು, ಲಕ್ಷೀ ಕಂಪನಿ, ಎಲೈಟ್ ಕಂಪನಿ, ಸೆಮಿನಿಸ್ ಕಂಪನಿ, ಚರ್ರೀಸ್ ಕಂಪನಿ, ಲಕ್ಷೀ ಇನ್ಪುಟ್ಸ್ ಕಂಪನಿಯ LHC-2045, Farmagen FG-MIRAI-20, SSAgritech SRUSTI 43, Agbees Seeds BALI-F1, Ravi hybrid seeds Dabbi Byadgi (6263) ಕಂಪನಿಯ ಬೀಜಗಳನ್ನು ಸಹ ಬಿತ್ತನೆಗಾಗಿ ಉಪಯೋಗಿಸಬಹುದಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ