ಬುಧವಾರ, ಜುಲೈ 5, 2023
ಮಾನಸಿಕ ರೋಗಿಗಳಿಗೆ ಸಾಂತ್ವನ ನುಡಿಗಳೊಂದಿಗೆ ಚಿಕಿತ್ಸೆ ನೀಡಿ: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ*
ಬಳ್ಳಾರಿ,ಜು.05(ಕರ್ನಾಟಕ ವಾರ್ತೆ):
ಎಲ್ಲರಿಗೂ ಆರೋಗ್ಯ ಎಂಬ ವಾಗ್ದಾನದಂತೆ ಪ್ರತಿಯೊಬ್ಬರ ದೈಹಿಕ, ಮಾನಸಿಕ, ಸಾಮಾಜಿಕ ಸುಸ್ಥಿರತೆಗಾಗಿ ಆರೋಗ್ಯ ಸೇವೆಗಳನ್ನು ನಿರಂತರವಾಗಿ ನೀಡುವ ಮೂಲಕ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿ ವೈದ್ಯರ ಮೇಲಿದೆ. ಅವರಿಗೆ ಸಾಂತ್ವನ ನುಡಿಗಳಿಂದ ಚಿಕಿತ್ಸೆ ನೀಡುವ ಮೂಲಕ ಉಚಿತ ಮಾನಸಿಕ ಸಹಾಯವಾಣಿ ಟೆಲಿಮನಸ್ 14416 ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಹೇಳಿದರು.
ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಬುಧವಾರದಂದು ಮಾನಸಿಕ ರೋಗಿಗಳ ಗುರುತಿಸುವಿಕೆ ಮತ್ತು ಚಿಕಿತ್ಸೆ ಕುರಿತ ವೈದ್ಯಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
1996ರಲ್ಲಿ ಇಡೀ ರಾಷ್ಟ್ರದಲ್ಲಿ ಮಾನಸಿಕ ರೋಗಿಗಳ ಚಿಕಿತ್ಸೆಗಾಗಿ ಯಾವ ರೀತಿಯಲ್ಲಿ ರೋಗಿಗಳ ಗುರುತಿಸುವಿಕೆ, ಸಮಾಲೋಚನೆ, ಚಿಕಿತ್ಸೆ, ಮನೆ ಭೇಟಿ, ಕುಟುಂಬದ ಸದಸ್ಯರ ಜವಾಬ್ದಾರಿಗಳು ಮುಂತಾದವುಗಳನ್ನು ಪೈಲೆಟ್ ಕಾರ್ಯಕ್ರಮವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಇವತ್ತಿಗೂ ಬಳ್ಳಾರಿ ಮಾದರಿಯನ್ನು ರಾಷ್ಟ್ರ ಮಟ್ಟದಲ್ಲಿ ಅನುಸರಿಸುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ ಎಂದು ಹೇಳಿದರು.
ಮಾನಸಿಕ ಕಾಯಿಲೆಗಳಾದ ಆತಂಕದ ಕಾಯಿಲೆ, ಖಿನ್ನತೆ, ಗೀಳು ರೋಗ, ಹಿಸ್ಟೀರಿಯಾ, ಸ್ಕಿಜೋಫ್ರೇನಿಯಾ, ಮುಂತಾದ ಕಾಯಿಲೆಗಳನ್ನು ನಾವು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದಾಗಿದೆ ಎಂದು ತಿಳಿಸಿದರು.
ಪ್ರತಿ ಮಂಗಳವಾರ ಮನೋಚೈತನ್ಯ ಕಾರ್ಯಕ್ರಮದಡಿ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞೆ ಡಾ.ಭುವನೇಶ್ವರಿದೇವಿ ಅವರ ನೇತೃತ್ವದಲ್ಲಿ ಶಿಬಿರಗಳನ್ನು ಏರ್ಪಸಲಾಗುತ್ತಿದ್ದು, ರೋಗಿಗಳಿಗೆ ಉಚಿತ ಚಿಕಿತ್ಸೆ, ಸಲಹೆ ಮತ್ತು ಸರಕಾರದ ಮಾಶಾಸನಕ್ಕಾಗಿ ಅರ್ಹರಿಗೆ ಯುಡಿಐಡಿ ಕಾರ್ಡುಗಳನ್ನು ಮಾಡಲಾಗುತ್ತದೆ. ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾನಸಿಕ ತಜ್ಞರಾದ ಡಾ.ಭುವನೇಶ್ವರಿದೇವಿ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಮಾನಸಿಕ ಕಾರ್ಯಕ್ರಮ ವಿಭಾಗದ ಶಾಂತಕುಮಾರ್, ರಂಜೀತಾ, ಕಾವ್ಯ ಸೇರಿದಂತೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಅಡಳಿತ ವೈದ್ಯಾಧಿಕಾರಿಗಳು ಹಾಗೂ ಇತರೆ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ