ಗುರುವಾರ, ಮಾರ್ಚ್ 14, 2024
ಹಣಕಾಸು ಶಿಕ್ಷಣ ಮತ್ತು ಹೂಡಿಕೆ ದೇಶದ ಅಭಿವೃದ್ಧಿಗೆ ಪೂರಕ: ಪ್ರೊ.ಕೆ.ಎಂ.ಮೇತ್ರಿ
ಬಳ್ಳಾರಿ,ಮಾ.14(ಕರ್ನಾಟಕ ವಾರ್ತೆ):
ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಎಂಬ ವಿಷಯವನ್ನು ಕೌಶಲ್ಯವರ್ಧನೆ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಅಳವಡಿಸಿರುವುದರಿಂದ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕ್ಷಿಪ್ರ ಕಲಿಕೆಗೆ ಹಾಗೂ ಉದ್ಯೋಗಶೀಲರನ್ನಾಗಿಸಲು ಸಹಕಾರಿಯಾಗುತ್ತದೆ ಎಂದು ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಎಂ.ಮೇತ್ರಿ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ವಾಣಿಜ್ಯ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ವ್ಯಾಪಾರದಲ್ಲಿ ಸ್ಥಿತಿಸ್ಥಾಪಕತ್ವದ ನವ ಪ್ರವೃತ್ತಿ’ ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಾಣಿಜ್ಯ ಅಥವಾ ನಿರ್ವಹಣಾ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗದೇ ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಅಧ್ಯಯನ ವಿಷಯವಾಗಿ ಪರಿಚಯಿಸುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು.
ಪ್ರತಿಯೊಂದು ವಿಷಯದ ಅಭಿವೃದ್ಧಿಗೆ ತಳಮಟ್ಟದ ಅಧ್ಯಯನ ಬಹು ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಸೌತ್ ಇಂಡಿಯನ್ ರಿಜನಲ್ ಕೌನ್ಸಿಲ್ ಆಫ್ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ನಿಕಟಪೂರ್ವ ಅಧ್ಯಕ್ಷರಾದ ಸಿ.ಎ.ಪನ್ನಾರಾಜ್.ಎಸ್ ಅವರು ಮಾತನಾಡಿ, ವ್ಯಾಪಾರದಲ್ಲಿ ಅನೇಕ ಅಡೆ-ತಡೆಗಳು ಇರುವುದು ಸಾಮಾನ್ಯ ಅದರಿಂದ ಹೊರಬರುವುದು ಈ ಸಮ್ಮೇಳನÀದ ಉದ್ದೇಶವಾಗಿದೆ ಎಂದು ತಿಳಿಸಿದರು.
ಪ್ರಸುತ್ತ ದಿನಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮವು ದೇಶದ ಅಭಿವೃದ್ಧಿಗೆ ಪೂರಕವಾಗಿದೆ. ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ವಾಣಿಜ್ಯೋದ್ಯಮಿಗಳು ಇದರ ಸದಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಅಗಮಿಸಿದ್ದ ಅಂತರರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳ ಮೌಂಟ್ ಕಾರ್ಮೆಲ್ ಕಾಲೇಜು ಡೀನರಾದ ಡಾ.ಎಸ್.ರಮೇಶ್ ಅವರು ಮಾತನಾಡಿ, ಹಣ, ಅಧಿಕಾರ, ಆರೋಗ್ಯ ಮತ್ತು ಮನೋರಂಜನೆ ಒಂದಕ್ಕೊಂದು ಸಂಬಂಧಿಸಿದ ವಿಷಯಗಳು. ಇವುಗಳ ಸಮರ್ಪಕ ನಿರ್ವಹಣೆ ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಎಲ್ಲರಿಂದ ಸಾಧ್ಯವಿಲ್ಲ. ತಂತ್ರಜ್ಞಾನ ಬಳಕೆ ಮತ್ತು ಕೌಶಲ್ಯಯುತ ಕಲಿಕೆಯ ಸಮಜ್ಞಾನದಿಂದ ಇವುಗಳ ನಿರ್ವಹಣೆ ಭಾಗಶಃ ಪಡೆದುಕೊಳ್ಳಬಹುದು ಎಂದು ಹೇಳಿದರು.
ಸಮ್ಮೇಳನದಲ್ಲಿ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಕುರಿತಾದ ಪ್ರಬಂಧ ಮಂಡಿಸಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವರಾದ ರುದ್ರೇಶ್ ಎಸ್.ಎನ್., ಕುಲಸಚಿವರು (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್, ವಿತ್ತಾಧಿಕಾರಿ ಪ್ರೊ.ಸದ್ಯೋಜಾತಪ್ಪ, ನಿರ್ವಹಣಾಶಾಸ್ತ್ರ ಡೀನರಾದ ಪ್ರೊ.ಜಿ.ಪಿ. ದಿನೇಶ್ ಸಮ್ಮೇಳನದ ಸಂಚಾಲಕರಾದ ಪ್ರೊ.ಜೀಲನ್ ಬಾಷಾ ಹಾಗೂ ಪ್ರೊ.ಭೀಮನಗೌಡ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ