ಮಂಗಳವಾರ, ಏಪ್ರಿಲ್ 16, 2024

ಸಂಡೂರು: ನರೇಗಾ ಕಾಮಗಾರಿ ಸ್ಥಳಕ್ಕೆ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್ ಭೇಟಿ, ಮತದಾನ ಜಾಗೃತಿ

ಬಳ್ಳಾರಿ,ಏ.16(ಕರ್ನಾಟಕ ವಾರ್ತೆ): ಮೇ 07 ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ನರೇಗಾ ಕೂಲಿಕಾರರು ಮತಗಟ್ಟೆಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗಿರಿಜಾ ಶಂಕರ ಅವರು ಕರೆ ನೀಡಿದರು. ಸಂಡೂರು ತಾಲ್ಲೂಕಿನ ವಡ್ಡು ಮತ್ತು ತಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ನಾಲದಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಮಂಗಳವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಕ್ಕೆ ಸುಭದ್ರ ಆಡಳಿತ ನೀಡುವ ವ್ಯಕ್ತಿಯನ್ನು ಆರಿಸುವಲ್ಲಿ ಮತದಾನ ಅತ್ಯಂತ ಮಹತ್ವದ ಕಾರ್ಯವಾಗಿದೆ. ಯಾರ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗದೇ ಪ್ರತಿಯೊಬ್ಬರು ಮತದಾನ ಮಾಡುವಂತೆ ತಿಳಿಸಿದರು. ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮತದಾನ ಮಾಡಲು ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು. ಬೇಸಿಗೆ ಕಾಲ ಇರುವುದರಿಂದ 3 ತಿಂಗಳ ಕಾಲ ನಿರಂತರವಾಗಿ ನರೇಗಾ ಕೆಲಸದಲ್ಲಿ ಕಾರ್ಯನಿರ್ವಹಿಸುವುದರಿಂದ ಬರುವ ಕೂಲಿ ಹಣದಿಂದ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಎಲ್ಲ ಕೂಲಿಕಾರರು ಸರಿಯಾಗಿ ಕೆಲಸ ನಿರ್ವಹಿಸಿ ಪೂರ್ತಿ ಕೂಲಿ ಹಣ ಪಡೆಯಬೇಕು ಎಂದರು. ಕೂಲಿ ದರ ರೂ.316 ರಿಂದ ರೂ.349 ಹೆಚ್ಚಳವಾಗಿರುವ ಕುರಿತು ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಎಲ್ಲಾ ಯೋಜನೆಗಳಿಗೆ ಏಕೀಕೃತ ಸಹಾಯವಾಣಿ 8277506000 ಇರುತ್ತದೆ. ಇನ್ಮುಂದೆ 18004258666 ಅಸ್ತಿತ್ವ ದಲ್ಲಿರುವುದಿಲ್ಲ ಎಂದು ಕೂಲಿಕಾರ್ಮಿಕರಿಗೆ ಮಾಹಿತಿ ನೀಡಿದರು. *ಪ್ರತಿಜ್ಞಾವಿಧಿ ಬೋಧನೆ:* ನರೇಗಾ ಕಾಮಗಾರಿ ಸ್ಥಳದಲ್ಲಿ ನನ್ನ ಮತ ನನ್ನ ಹಕ್ಕು ಎಂಬ ಶೀರ್ಷಿಕೆ ಬರೆದು ಅಕ್ಷರಗಳಿಗೆ ಅಲಂಕರಿಸಲಾಗಿತ್ತು ಹಾಗೂ ನರೇಗಾ ಕೂಲಿಕಾರರಿಗೆ ಕಡ್ಡಾಯ ಮತ್ತು ನೈತಿಕ ಮತದಾನದ ಕುರಿತು ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕರಾದ ನಟರಾಜ.ಬಿ.ಎಂ, ಪಿಡಿಒ ಬೂದುಗುಂಪಿ ಪಕ್ಕೀರಪ್ಪ, ರಂಗಸ್ವಾಮಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಕೂಲಿಕಾರರು ಹಾಜರಿದ್ದರು. *ತೋರಣಗಲ್ಲು:* ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ, ತೋರಣಗಲ್ಲು ಗ್ರಾಮದ ಸರ್ವೆ ನಂಬರ್ 294 ಹಳ್ಳದ ಪಶ್ಚಿಮ ಭಾಗದ ನಾಲದ ಎಡ ದಂಡೆಯಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಲೋಕಸಭೆ ಚುನಾವಣೆಗೆ ಎಲ್ಲಾ ಕಾರ್ಮಿಕರು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು. ಈ ವೇಳೆ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಜಿಲ್ಲಾ ಐಇಸಿ ಸಂಯೋಜಕರಾದ ನಟರಾಜ.ಬಿ.ಎಂ, ಪಿಡಿಒ ಸಿದ್ದಲಿಂಗಯ್ಯಸ್ವಾಮಿ ಎಮ್ , ಟಿಐಇಸಿ ಯಂಕಪ್ಪ, ಬಿಎಫ್ಟಿ ನಾಗೇಶ್, ಡಿಇಓ ಪಂಪಾಪತಿ ಸೇರಿದಂತೆ ಇತರರು ಹಾಜರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ