ಗುರುವಾರ, ಜೂನ್ 1, 2023

ಮೈಸೂರು ರಂಗಾಯಣದ ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ (ಡಿಪ್ಲೋಮಾ) ಅರ್ಜಿ ಆಹ್ವಾನ ಬಳ್ಳಾರಿ,ಜೂ.01(ಕರ್ನಾಟಕ ವಾರ್ತೆ): ಮೈಸೂರಿನ ಭಾರತೀಯ ರಂಗಶಿಕ್ಷಣ ಕೇಂದ್ರದಿಂದ 2023-24 ನೇ ಸಾಲಿನಲ್ಲಿ ರಂಗಶಿಕ್ಷಣದಲ್ಲಿ ಹತ್ತು ತಿಂಗಳ ಡಿಪ್ಲೋಮಾ ಕೋರ್ಸ್ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ರೆಪರ್ಟರಿಯು ಕಳೆದ 14 ವರ್ಷಗಳ ಹಿಂದೆ ಸ್ಥಾಪಿಸಿದ ಭಾರತೀಯ ರಂಗಶಿಕ್ಷಣ ಕೇಂದ್ರ ಪೂರ್ಣ ಪ್ರಮಾಣದ ರಂಗ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿದ್ಯಾಲಯದ ಮಾನ್ಯತೆ ಪಡೆದಿದೆ. 2023-24ನೇ ಸಾಲಿನ ಈ ರಂಗ ತರಬೇತಿ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ 18 ವರ್ಷ ತುಂಬಿದ ಮತ್ತು 28 ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಪ್ರತಿ ತಿಂಗಳು 5 ಸಾವಿರ ರೂ.ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು. ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ರಂಗಾಯಣದ ವೆಬ್‍ಸೈಟ್ http://rangayanamysore.karnataka.gov.in ನಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಶುಲ್ಕ ಸಾಮಾನ್ಯ ವರ್ಗ ರೂ.230, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.180 (ರಂಗಕೈಪಿಡಿ ಶುಲ್ಕ ರೂ.30 ಒಳಗೊಂಡಂತೆ) ಡಿ.ಡಿ.ಯನ್ನು ಉಪ ನಿರ್ದೇಶಕರು, ರಂಗಾಯಣ, ಮೈಸೂರು (Deputy Director, Rangayana, Mysore) ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂನ್ 05 ರೊಳಗಾಗಿ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದು. ರಂಗಾಯಣದ ಆವರಣದಲ್ಲಿ ನಡೆಯುವ ಈ ಸಂದರ್ಶನಕ್ಕೆ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗಬೇಕು. ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಸಂದರ್ಶನದ ದಿನ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ಮಾತ್ರ ರಂಗಾಯಣದಿಂದ ಮಾಡಲಾಗುವುದು. ಯಾವುದೇ ವಸತಿ ವ್ಯವಸ್ಥೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.0821-2512639, 9448938661, 9148827720, 8867514311 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್‍ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ