ಗುರುವಾರ, ಆಗಸ್ಟ್ 31, 2023

ಸಮುದಾಯದಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಡಿಹೆಚ್‍ಒ ಡಾ.ಯಲ್ಲಾ ರಮೇಶ್ ಬಾಬು

ಬಳ್ಳಾರಿ,ಆ.31(ಕರ್ನಾಟಕ ವಾರ್ತೆ): ಜೀವಕ್ಕೆ ಅಪಾಯ ಒದಗಿಸಬಹುದಾದ ಸೊಳ್ಳೆ ಕಚ್ಚುವಿಕೆಯಿಂದ ಬರುವ ಡೆಂಗ್ಯೂ, ಮಲೇರಿಯಾ ಸೇರಿದಂತೆ ಚಿಕಿನ್‍ಗುನ್ಯಾ, ಆನೆಕಾಲು, ಮೆದುಳು ಜ್ವರ ಮುಂತಾದವುಗಳನ್ನು ತಡೆಗಟ್ಟಲು ಸಾರ್ವಜನಿಕರಿಗೆ ನಿಂತ ನೀರಿನ ತಾಣಗಳ ಸೂಕ್ತ ನಿರ್ವಹಣೆ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಪ್ರತಿಯೊಬ್ಬರು ಮನಃ ಪೂರ್ವಕವಾಗಿ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್‍ಬಾಬು ಅವರು ಸೂಚಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಘಟಕ ಇವರಿಂದ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಸುರಕ್ಷಾ ಅಧಿಕಾರಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯವಾಗಿ ಮಳೆಗಾಲದ ಆರಂಭದಲ್ಲಿ ಕಂಡುಬರುತ್ತಿದ್ದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಪ್ರಸ್ತುತ ವರ್ಷ ಪೂರ್ತಿ ಕಂಡುಬರುತ್ತಿದ್ದು, ಇದು ಅತ್ಯಂತ ಅಪಾಯಕಾರಿ ಅಂಶವಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ತಮ್ಮ ನೀರು ಸಂಗ್ರಹಣೆಯ ವಿಧಾನಗಳ ನಿರ್ವಹಣೆಯನ್ನು ಜನತೆಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಮೂಲಕ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು. ಪ್ರತಿ ಶನಿವಾರ ನೀರು ಸಂಗ್ರಹಗಳನ್ನು ಖಾಲಿ ಮಾಡಿಸುವ ಹಾಗೂ ಕನಿಷ್ಟ 2 ಗಂಟೆಗಳ ಒಣಗಿಸುವ ಪ್ರಕ್ರಿಯೆ ನಂತರ ನೀರು ತುಂಬಿಸಿ ಸರಿಯಾಗಿ ಮುಚ್ಚಳವನ್ನು ಮುಚ್ಚಿಸುವ ಕುರಿತು ತಿಳಿಸುವ ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದರು. ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯ ಸಿಬ್ಬಂದಿ ವರ್ಗದವರು ಸೊಳ್ಳೆ ಮರಿಗಳನ್ನು (ಲಾರ್ವ) ಪ್ರಾತ್ಯಕ್ಷತೆಯನ್ನು ಕೈಗೊಳ್ಳುವ ಮೂಲಕ ಬಾಲಹುಳಗಳು ಎಂಬ ರೂಢಿ ಹೆಸರಿನಲ್ಲಿರುವ ಸೊಳ್ಳೆಯ ಮರಿಗಳನ್ನು ನಿಯಂತ್ರಣ ಮಾಡಲು ಸೂಕ್ರ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಾಕಡಿ, ಎನ್.ವಿ.ಬಿ.ಡಿ.ಸಿ.ಪಿ ಸಲಹೆಗಾರರಾದ ಪ್ರತಾಪ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿರುಪಾಕ್ಷಿ, ರವೀಂದ್ರ ಜಿನಗ ಸೇರಿದಂತೆ ಇತರೆ ಸಿಬ್ಬಂದಿಯವರು ಹಾಜರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ