ಶುಕ್ರವಾರ, ಆಗಸ್ಟ್ 25, 2023

ಆರ್ಯ ವೈಶ್ಯ ಸಮುದಾಯ ನಿಗಮದಿಂದ ವಿವಿಧ ಸೌಲಭ್ಯಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಆ.25(ಕರ್ನಾಟಕ ವಾರ್ತೆ): ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಬಯಸುವವರು ಕಡ್ಡಾಯವಾಗಿ ಆನ್‍ಲೈನ್ ವೆಬ್‍ಸೈಟ್ kacdc.karnataka.gov.in ರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 18 ಕೊನೆಯ ದಿನವಾಗಿರುತ್ತದೆ. *ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ:* ಈ ಯೋಜನೆಯಲ್ಲಿ ಕನಿಷ್ಠ ರೂ.50 ಸಾವಿರಗಳಿಂದ ಗರಿಷ್ಠ ರೂ.1 ಲಕ್ಷ ಸಾಲ ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20 ರಷ್ಟು ಸಹಾಯಧನ ಹಾಗೂ ಶೇ.80ರಷ್ಟು ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. 2 ತಿಂಗಳ ವಿರಾಮ ಅವಧಿ ಇರುತ್ತದೆ. ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. *ಆರ್ಯ ವೈಶ್ಯಆಹಾರ ವಾಹಿನಿ ಯೋಜನೆ:* ಈ ಯೋಜನೆಯಡಿ ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್/ಸಹಕಾರಿ ಸಂಘಗಳಿಂದ ಸಾಲ ಪಡೆಯಬೇಕು ಹಾಗೂ ನಿಗಮದಿಂದ ಗರಿಷ್ಠ ರೂ.2ಲಕ್ಷಗಳ ಸಹಾಯಧನವನ್ನು ನೀಡಲಾಗುವುದು. *ವಾಸವಿ ಜಲಶಕ್ತಿ ಯೋಜನೆ:* ಈ ಯೋಜನೆಯಡಿ 2 ರಿಂದ 05 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸಾಲ-ಸಹಾಯಧನವನ್ನು ನೀಡಲಾಗುವುದು. ಈ ಯೋಜನೆಯಡಿ ಗರಿಷ್ಠ ರೂ.2 ಲಕ್ಷಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು ಹಾಗೂ ವಿದ್ಯುದೀಕರಣಕ್ಕಾಗಿ ರೂ.50ಸಾವಿರ ಸಹಾಯಧನ ನೀಡಲಾಗುವುದು. 6 ತಿಂಗಳ ವಿರಾಮಾವಧಿ ಇರುತ್ತದೆ ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. *ಅರಿವು ಶೈಕ್ಷಣಿಕ ಸಾಲ ಯೋಜನೆ:* ಈ ಯೋಜನೆಯಲ್ಲಿ ಸಿ.ಇ.ಟಿ./ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1ಲಕ್ಷ ಸಾಲವನ್ನು ಶೇ.2ರ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. (ಈ ಯೋಜನೆಗೆ ಸಂಬಂಧಪಟ್ಟಂತೆ ಸಿ.ಇ.ಟಿ ಪರೀಕ್ಷೆಯ ಕೌನ್ಸಿಲಿಂಗ್ ಮುಗಿದ ನಂತರ ಅರ್ಜಿಗಳನ್ನು ಸ್ವೀಕರಿಸಲಾಗುವುದು). *ಅರ್ಹತೆಗಳು:* ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು). ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರಬೇಕು. ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು. ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಳಿಗೆ ಶೇ.5 ಮೀಸಲಾತಿ ಇರಿಸಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. (ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ.) ಹೆಚ್ಚಿನ ಮಾಹಿತಿಗಾಗಿ ನಗರದ ಕುಮಾರಸ್ವಾಮಿ ದೇವಸ್ಥಾನದ ಎದುರುಗಡೆ ಕ್ಲಬ್ ರಸ್ತೆ ವೀರನಗೌಡ ಕಾಲೋನಿಯ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ಕಚೇರಿಯ ಸಹಾಯವಾಣಿ ದೂ.08392-267038 ಹಾಗೂ ನಿಗಮದ ಕೇಂದ್ರ ಕಚೇರಿಯ ಸಹಾಯವಾಣಿ ಮೊ.9448451111 ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ