ಮಂಗಳವಾರ, ನವೆಂಬರ್ 7, 2023

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಿ

ಬಳ್ಳಾರಿ,ನ.07(ಕರ್ನಾಟಕ ವಾರ್ತೆ): ಪ್ರಸ್ತಕ ಸಾಲಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆ ವಿಮೆಗೆ ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಬ್ಯಾಂಕುಗಳಲ್ಲಿ ವಿಮೆಗೆ ನೋಂದಾಯಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆಗಳಾದ ಜೋಳ, ಕಡಲೆ (ಮಳೆಯಾಶ್ರಿತ) ಹಾಗೂ ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ನೆಲಗಡಲೆ (ಶೇಂಗಾ), ಭತ್ತ. ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ಸೂರ್ಯಕಾಂತಿ, ಈರುಳ್ಳಿ ಹಾಗೂ ಮಳೆಯಾಶ್ರಿತ ಬೆಳೆಗಳಾದ ಜೋಳ, ಹುರುಳಿ, ಸೂರ್ಯಕಾಂತಿ, ಕುಸುಮೆ ಮತ್ತು ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಸೂರ್ಯಕಾಂತಿ, ಈರುಳ್ಳಿ ಬೆಳೆಗಳು ಈ ಜಿಲ್ಲೆಯ ಬೆಳೆಗಳಾಗಿದ್ದು, ನಿಗದಿತ ಅವಧಿಯೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. *ಬೆಳೆ ವಿಮೆ: ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕ:* ಹಿಂಗಾರು ಹಂಗಾಮಿನ ನೀರಾವರಿ ಬೆಳೆಗಳಾದ ಜೋಳ, ಕಡಲೆ ಬೆಳೆಗಳಿಗೆ ಈ ಸಾಲಿನ ಡಿ.30, ಮಳೆಯಾಶ್ರಿತ ಬೆಳೆ ಜೋಳ ನ.15, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ ಡಿ.15, ಕಡಲೆ ಬೆಳೆಗೆ ಡಿ.30, ಈರುಳ್ಳಿ, ಹುರುಳಿ ಬೆಳೆಗೆ ಡಿ.01. ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ, ಈರುಳ್ಳಿ ಬೆಳೆಗಳಿಗೆ ವಿಮೆಗೆ ನೋಂದಾಯಿಸಿಕೊಳ್ಳಲು 2024 ಫೆ.28 ಕೊನೆಯ ದಿನಾಂಕಗಳಾಗಿವೆ. ಈ ವಿಮೆ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್‍ಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳನ್ನು (ಕಾಮನ್ ಸರ್ವೀಸ್ ಸೆಂಟರ್ಸ್) ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ