ಮಂಗಳವಾರ, ಆಗಸ್ಟ್ 1, 2023

ಆಗಸ್ಟ್ 1 ರಿಂದ 7ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ

ಬಳ್ಳಾರಿ,ಆ.01(ಕರ್ನಾಟಕ ವಾರ್ತೆ): ವಿಶ್ವದಾದ್ಯಂತ ಸ್ತನ್ಯಪಾನದ ಮಹತ್ವ, ಉಪಯೋಗವನ್ನು ಜನರಿಗೆ ತಿಳಿಸಿ, ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 1 ರಿಂದ 7 ರವರೆಗೆ ಅಂತರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲೇ ಆಹಾರ ಮತ್ತು ಅಮೃತ. ಮಗುವಿನ ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ಪೆÇೀಷಕಾಂಶಗಳು, ರೋಗದಿಂದ ರಕ್ಷಣೆ ನೀಡುವ ಆಂಟಿಬಾಡಿಗಳು ಈ ಹಾಲಿನಲ್ಲಿ ಇರುವ ಕಾರಣದಿಂದ ಸ್ತನ್ಯಪಾನ ಮಗುವಿಗೆ ಅತ್ಯಮೂಲ್ಯವಾಗಿದೆ. ಮಗು ಜನಿಸಿದ ಅರ್ಧ ಗಂಟೆಯಿಂದ 1 ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲುಣಿಸಬೇಕು. ಮೊದಲ 3 ದಿನ ಬರುವ ಗೀಬಿನ ಹಾಲನ್ನು (ಕೊಲೊಸ್ಟ್ರೋಮ್) ಮಗುವಿಗೆ ನೀಡಲೇಬೇಕು. ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಕೊಲೊಸ್ಟ್ರೋಮ್‍ನಲ್ಲಿ ಪೌಷ್ಟಿಕಾಂಶ ಉತ್ಕøಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ ಹಾಗೂ ಮಗುವಿನ ಜಠರ ಸ್ವಚ್ಛವಾಗುತ್ತದೆ. 6 ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. (ವೈದ್ಯರು ತಿಳಿಸಿದ ಔಷಧಗಳನ್ನು ಹೊರತು ಪಡಿಸಿ) ಎಂತಹ ಕಡುಬೇಸಿಗೆ ಇದ್ದರೂ ನೀರನ್ನು ಕುಡಿಸುವ ಅವಶ್ಯಕತೆ ಇರುವುದಿಲ್ಲ. ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಕೊಡಬಾರದು. 6 ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೂರಕ–ಪೆÇೀಷಕ ಮೆದು ಆಹಾರ ಆರಂಭಿಸಬೇಕು. ಮಗುವಿಗೆ 2 ವರ್ಷ ತುಂಬುವ ತನಕ ಎದೆಹಾಲನ್ನು ಮುಂದುರಿಸಬೇಕು. ಇದು ಮಗುವಿನ ಮೆದುಳು ಬೆಳವಣಿಗೆಗೂ ಅವಶ್ಯಕ ಹಾಗೂ ಮಗುವಿನ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ. ಸೂಕ್ತ ರೀತಿಯಲ್ಲಿ ಎದೆಹಾಲುಣಿಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ. ಇದು ನೈಸರ್ಗಿಕ ಕುಟುಂಬ ಯೋಜನೆ ಇದ್ದಂತೆ. 2 ವರ್ಷ ಸರಿಯಾಗಿ ಎದೆಹಾಲುಣಿಸಿದ ತಾಯಿಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪವಾಗಿರುತ್ತದೆ ಹಾಗೂ ಸ್ತನ್ಯಪಾನ ಮಾಡಿಸುವ ತಾಯಿ–ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ. ಕುಟುಂಬದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ. ದೇಶದ ಆರ್ಥಿಕತೆಗೂ ಸಹಾಯಕ. *ಸ್ಯನ್ಯಪಾನಕ್ಕಿರುವ ಅಡ್ಡಿಯಾಗುವ ಅಂಶಗಳು:* ಮೊದಲ 3 ದಿನ ಬರುವ ಗೀಬಿನ ಹಾಲು ಕೆಟ್ಟ ಹಾಲಾಗಿದ್ದ ಕೊಡಬಾರದೆಂಬ ಮೂಢನಂಬಿಕೆ. ಮಗುವಿನ ಹೊಟ್ಟೆ ಸ್ವಚ್ಛವಾಗಲಿ ಎಂದು ಆರಂಭದ 3 ದಿನ ಹರಳೆಣ್ಣೆ ಚೀಪಿಸುವ ಪದ್ಧತಿ. ಕೇವಲ ಎದೆಹಾಲೇ 6 ತಿಂಗಳು ಸಾಕಾಗುವುದಿಲ್ಲ ಎಂಬ ಭಾವನೆ. ಕುಟುಂಬದಲ್ಲಿ ತಾಯಿಗೆ ಮಾನಸಿಕ ಬೆಂಬಲ ನೀಡುವವರ ಕೊರತೆ. ಕಾರ್ಯನಿರತ ಮಹಿಳೆಯರಿಗೆ ರಜೆಯ ಅನಾನುಕೂಲ. ಕೆಲಸದ ಸ್ಥಳದಲ್ಲಿ ಎದೆಹಾಲುಣಿಸುವ ಸೌಲಭ್ಯವಿಲ್ಲದಿರುವುದು. ಎದೆಹಾಲುಣಿಸುವ ತಾಯಂದಿರಿಗೆ ಬರುವ ಸಂಶಯ ನಿವಾರಿಸಲು ಆಪ್ತಸಮಾಲೋಚನೆಯ ಕೊರತೆ. ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗುವ ತಾಯಂದಿರು. ಸಿಸೇರಿಯನ್ ಆದ ತಾಯಂದಿರಿಗೆ, ಚೊಚ್ಚಲ ಅಪ್ರಾಪ್ತ ಬಾಣಂತಿಯರಿಗೆ, ಅವಳಿ–ಜವಳಿ ಮಕ್ಕಳಿದ್ದ, ಕಡಿಮೆ ತೂಕದ ಮಗುವಿರುವ ತಾಯಂದಿರಿಗೆ ಮಾಹಿತಿ ಕೊರತೆ. ಮಗುವಿಗೆ 2 ವರ್ಷ ತುಂಬುವ ಮೊದಲೇ ತಾಯಿ ಮತ್ತೆ ಗರ್ಭಿಣಿಯಾಗುವುದು. *ಸ್ತನ್ಯಪಾನ ಸಂರಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು:* ಹೆರಿಗೆಗೂ ಮುನ್ನವೇ ‘ಕೊಲೊಸ್ಟ್ರೋಮ್’ ಬಗ್ಗೆ ತಾಯಿಗೆ ಮಾಹಿತಿ ಇರಬೇಕು. ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೇ ಯಶಸ್ವಿಯಾಗಿ ಎದೆಹಾಲುಣಿಸಬಲ್ಲೆ ಎಂಬ ಭರವಸೆ ತಾಯಿಗೆ ಬಂದಿರಬೇಕು. ಎದೆಹಾಲುಣಿಸುವ ಅವಧಿಯಲ್ಲಿ ತಾಯಂದಿರಿಗೆ ಕುಟುಂಬದವರ ಸಹಕಾರ ಅತಿ ಮುಖ್ಯ. ತಾಯಿಗೆ ಪೌಷ್ಟಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು. ಕಾರ್ಯನಿರತ ಮಹಿಳೆಯರಿಗೆ ಎದೆಹಾಲು ತೆಗೆಯುವ, ಸಂರಕ್ಷಿಸುವ ವಿಧಾನವನ್ನು ಕಲಿಸುವುದು, ಕೆಲಸದ ಸ್ಥಳದಲ್ಲಿಯೂ ಎದೆಹಾಲುಣಿಸಲು ಅನುಕೂಲ ಮಾಡಿಕೊಡುವುದು. ಮಗು ತೀವ್ರ ನಿಗಾ ಘಟಕದಲ್ಲಿದ್ದರೆ ಎದೆಹಾಲನ್ನು ನೀಡುವ ವಿಧಾನ, ಕಡಿಮೆ ತೂಕದ ಮಗು ಜನಿಸಿದಾಗ ‘ಕಾಂಗರು ಮದರ್ ಕೇರ್’ ವಿಧಾನ ತೋರಿಸಿಕೊಡುವುದು. ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ತಾಯಂದಿರಲ್ಲಿ ಜಾಗೃತಿ ಮೂಡಿಸಬೇಕು. “ದುಡಿಮೆಯಲ್ಲಿರುವ ಪಾಲಕರಿಗೆ ಸ್ತನ್ಯಪಾನದಲ್ಲಿ ಸಕ್ರಿಯಗೊಳಿಸಲು ಬದಲಾವಣೆಯನ್ನುಂಟುಮಾಡುವುದು” ಎಂಬುದು ‘ವಿಶ್ವ ಸ್ತನ್ಯಪಾನ ಸಪ್ತಾಹ-2023 ರ ಘೋಷಣೆಯಾಗಿದೆ. ಸ್ತನ್ಯಪಾನವನ್ನು ಸಂರಕ್ಷಿಸಿ, ಪೆÇೀತ್ಸಾಹಿಸಿ, ಮುಂದುವರಿಸಲು ಸರ್ಕಾರ, ಆರೋಗ್ಯ ಇಲಾಖೆ, ಸಂಘ–ಸಂಸ್ಥೆಗಳು, ಕುಟುಂಬದ ಸದಸ್ಯರೆಲ್ಲರೂ ಹೊಣೆ ಹೊರಬೇಕಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ