ಬುಧವಾರ, ಆಗಸ್ಟ್ 2, 2023
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಅಪರಾಧ: ಡಿಹೆಚ್‍ಒ ಡಾ.ಜನಾರ್ಧನ
ಬಳ್ಳಾರಿ,ಆ.02(ಕರ್ನಾಟಕ ವಾರ್ತೆ):
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧ, ಕಾಯ್ದೆ ಉಲ್ಲಂಘಿಸಿದವರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ಹೇಳಿದರು.
ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ ಅಡಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಭ್ರೂಣ ಹತ್ಯೆ ಮಾಡುವವರ ಹಾಗೂ ಈ ಕೆಲಸಕ್ಕೆ ಸಹಾಯ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆಗೆ ಸಂಬಂಧಿಸಿದಂತೆ ತಂತ್ರಜ್ಞಾನ ಬಳಕೆ ನಿಯಂತ್ರಿಸಲು ಹಾಗೂ ದುರ್ಬಳಕೆಯನ್ನು ಹತ್ತಿಕ್ಕಲು ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾಗಿದೆ. ಗರ್ಭ ಪೂರ್ವ ಮತ್ತು ಪ್ರಸವಪೂರ್ವ ವರ್ಗೀಕರಣ ತಂತ್ರ (ಪಿ.ಸಿ ಅಂಡ್ ಪಿ.ಎನ್.ಡಿ.ಟಿ) ನಿಯಂತ್ರಿಸಲಾಗಿದೆ ಎಂದು ಹೇಳಿದರು.
ಲಿಂಗದ ಆಯ್ಕೆ ನಿಷೇಧಕ್ಕೆ ಸಾಂಸ್ಥಿಕ ತಾಂತ್ರಿಕತೆಗಳನ್ನು ರೂಪಿಸಲು ಹಾಗೂ ವರ್ಗೀಕರಣ ತಂತ್ರಗಳ ಬಳಕೆಯನ್ನು ನಿಯಂತ್ರಿಸಲು ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ ಅವರು, ಹೆರಿಗೆ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಪ್ರಕಾರ ಮೊದಲ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಜೊತೆಗೆ ರೂ.50,000 ದಂಡ, ಎರಡನೇ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ, ರೂ.1 ಲಕ್ಷ ದಂಡ ಹಾಗೂ ವೈದ್ಯಕೀಯ ವೃತ್ತಿಯಿಂದ ಅಮಾನತುಗೊಳಿಸಲು ಅವಕಾಶ ಇದೆ. ಶಿಕ್ಷೆ ವೈದ್ಯರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರ ಗಂಡ, ಅತ್ತೆ, ಮಾವ ಹಾಗೂ ಅವರ ಸಂಬಂಧಿಕರೂ ಭ್ರೂಣಲಿಂಗ ಪತ್ತೆಗೆ ಪೆÇ್ರೀತ್ಸಾಹಿಸಿದರೆ ಅಂತಹವರೂ ಕೂಡ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಒಬ್ಬ ಮಹಿಳೆಯು ಗರ್ಭಿಣಿಯಾಗಿ ತಪಾಸಣೆಗೆ ತಾಯಿ ಕಾರ್ಡ್ ಪಡೆದ ದಿನದಿಂದ ಹೆರಿಗೆಯಾಗುವವರೆಗೆ ಇಲಾಖಾ ಸಿಬ್ಬಂದಿಗಳಾದ ಆಶಾ ಕಾರ್ಯಕರ್ತೆಯರು ಮತ್ತು ಮಹಿಳಾ ಆರೋಗ್ಯ ಸಹಾಯಕಿಯರು ಆ ಮಹಿಳೆಯ ಮೇಲೆ ನಿಗಾ ವಹಿಸುತ್ತಾರೆ. ಇದರಿಂದ ಅನಧಿಕೃತ ಗರ್ಭಪಾತಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಈವರೆಗೆ ಯಾವುದೇ ದೂರುಗಳು ಬಂದಿರುವುದಿಲ್ಲ. ಆದರೂ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ನಿಯಮಿತವಾಗಿ ತಪಾಸಣೆ ನಡೆಸಿ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಸೆಂಟರ್‍ಗಳ ನವೀಕರಣ ಹಾಗೂ ಹೊಸದಾಗಿ ಪರವಾನಿಗೆ ನೀಡಲು ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಮಂಡಿಸಿ ಪರವಾನಿಗೆ ನೀಡಲು ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಮೇಲ್ವಿಚಾರಣ ತಂಡದಿಂದ ನಾಲ್ಕು ಐವಿಎಫ್ ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲಾತಿಗಳು ಹಾಗೂ ನ್ಯೂನತೆಗಳ ಬಗ್ಗೆ ವಿವರವಾಗಿ ಪರಿಶೀಲಿಸಲಾಗಿದೆ ಹಾಗೂ ಈ ಕುರಿತು ಅಂತರ್‍ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಎಸ್.ಕಟ್ಟಿಮನಿ, ಸಮಿತಿಯ ಅಧ್ಯಕ್ಷರು ಹಾಗೂ ರೇಡಿಯಾಲಜಿಸ್ಟ್ ಡಾ.ಶಂಭು.ಎಸ್, ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಭಾವನಾ.ಡಿ, ಸ್ತ್ರೀ ರೋಗ ತಜ್ಞೆ ಡಾ.ಸ್ರವಂತಿ ಪುತ್ತ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ ಸೇರಿದಂತೆ ಅರುಣ ಕಂದಗಲ್ಲ, ಗೋಪಾಲ.ಕೆ.ಹೆಚ್ ಉಪಸ್ಥಿತರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ