ಮಂಗಳವಾರ, ಆಗಸ್ಟ್ 8, 2023

ಲಸಿಕಾ ಕಾರ್ಯಕ್ರಮ ನಿರ್ದೇಶನಾಲಯದ ಉಪನಿರ್ದೇಶಕ ಡಾ.ರಜನಿ ಬಿ.ಎನ್ ಹೇಳಿಕೆ ಲಸಿಕೆ ವಂಚಿತ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

ಬಳ್ಳಾರಿ,ಆ.08(ಕರ್ನಾಟಕ ವಾರ್ತೆ): ಮಗುವಿನ ಭವಿಷ್ಯದ ದೃಷ್ಟಿಯಿಂದ ಬಾಲ್ಯದಲ್ಲಿ ಕಾಡುವ ಹನ್ನೆರಡು ಮಾರಕ ರೋಗಗಳ ವಿರುದ್ಧ ಹಾಕುವಂತಹ ಲಸಿಕೆಗಳನ್ನು ಒಂದು ವರ್ಷದಲ್ಲಿ ಪೂರ್ಣವಾಗಿ ಹಾಕಿಸುವ ಮೂಲಕ ಮಗುವಿನ ಆರೋಗ್ಯ ಸುರಕ್ಷತೆಗೆ ಪಾಲಕರು ಕೈಜೋಡಿಸಬೇಕೆಂದು ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಲಸಿಕಾ ಕಾರ್ಯಕ್ರಮ ನಿರ್ದೇಶನಾಲಯದ ಉಪನಿರ್ದೇಶಕ ಡಾ.ರಜನಿ ಬಿ.ಎನ್ ಅವರು ತಿಳಿಸಿದರು. ಮಂಗಳವಾರದಂದು, ಬಳ್ಳಾರಿ ತಾಲೂಕಿನ ಸಂಪೂರ್ಣ ವಲಸೆ ಜನತೆ ವಾಸವಿರುವ ಗುಡಾರ್ ನಗರಕ್ಕೆ ಭೇಟಿ ನೀಡಿ, ಪರಿಣಾಮಕಾರಿ ಮಿಷನ್ ಇಂದ್ರಧನುಷ್-5.0 ಲಸಿಕಾ ಅಭಿಯಾನವನ್ನು ಪರಿಶೀಲಿಸಿ ತಾಯಂದಿರು ಮತ್ತು ಸ್ಥಳೀಯ ಮುಖಂಡರೊಂದಿಗೆ ಮಾತನಾಡುತ್ತಾ, ಮಗುವಿಗೆ ಹುಟ್ಟಿದ ತಕ್ಷಣ ನೀಡುವಂತಹ ಬಿಸಿಜಿ ಲಸಿಕೆಯು ಭವಿಷ್ಯದಲ್ಲಿ ಕ್ಷಯರೋಗದಿಂದ ರಕ್ಷಿಸುತ್ತದೆ ಎಂದು ಹೇಳಿದರು. ಮಗುವಿನ ವಯಸ್ಸಿಗನುಸ್ಸಾರವಾಗಿ ನೀಡುವಂತಹ ಲಸಿಕೆಗಳನ್ನು ಒಂದು ವರ್ಷ ವಯಸ್ಸಿನೊಳಗೆ ಪೂರ್ಣವಾಗಿ ಹಾಗೂ ವರ್ಧಕ ರೂಪದಲ್ಲಿ ಎರಡು ವರ್ಷ ವಯಸ್ಸಿನೊಳಗೆ ಲಸಿಕೆ ಹಾಕಿಸಿದಲ್ಲಿ ಸಂಪೂರ್ಣ ಲಸಿಕೆ ಪಡೆದಂತಾಗುವುದು, ಇದರಿಂದ ಮಗು ಸುರಕ್ಷಿತವಾಗಿರುತ್ತದೆ. ಎಲ್ಲ ಲಸಿಕೆಗಳು ಉಚಿತವಾಗಿದ್ದು, ಪ್ರಸ್ತುತ ಆಗಸ್ಟ್ 7 ರಿಂದ 12 ರವರೆಗಿನ ಅವಧಿಯಲ್ಲಿ ಲಸಿಕೆಗಳನ್ನು ಹಾಕಿಸದ ಪಾಲಕರು ತಪ್ಪದೇ ಮಕ್ಕಳಿಗೆ ಹಾಕಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ, ವಿಶ್ವ ಆರೋಗ್ಯ ಸಂಸ್ಥೆಯ ರಾಜ್ಯ ಪ್ರತಿನಿಧಿ ಡಾ.ಅರುಣ ಕುಮಾರ್.ಕೆ.ಎಸ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನೀಲಕುಮಾರ, ಡಬ್ಲ್ಯೂಹೆಚ್‍ಒ ಬಳ್ಳಾರಿ ವಲಯ ಸರ್ವೇಕ್ಷಣಾಧಿಕಾರಿ ಡಾ.ಆರ್.ಎಸ್.ಶ್ರೀಧರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ವೈದ್ಯಾಧಿಕಾರಿ ಡಾ.ಮರಿಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಜಿಲ್ಲಾ ನರ್ಸಿಂಗ್ ಅಧಿಕಾರಿ ಗಿರೀಶ್, ಮುಖಂಡ ಜಂಬಣ್ಣ ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಯವರು ಹಾಜರಿದ್ದರು. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ