ಗುರುವಾರ, ನವೆಂಬರ್ 9, 2023

ಬಳ್ಳಾರಿ,ನ.09(ಕರ್ನಾಟಕ ವಾರ್ತೆ): ಸಮುದಾಯದ ಜನರಿಗೆ ಅತಿಸಾರ ಭೇದಿ ನಿಯಂತ್ರಣ ಕುರಿತು ಜಾಗ್ರತೆ ಮೂಡಿಸಲು ನ.15ರಿಂದ 30ರವರೆಗೆ ಮನೆ-ಮನೆ ಬೇಟಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಇಂದು ನಗರದ ಜಿಲ್ಲಾ ಪಂಚಾಯತ್‍ನ ವಿಡೀಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಜರುಗಿದ ತೀವ್ರತರ ಅತಿಸಾರ ಬೇಧಿ ನಿಯಂತ್ರಣ ಅಭಿಯಾನದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆಗಳಿಗೆ ಭೇಟಿ ಕೈಗೊಳ್ಳುವ ಆರೋಗ್ಯ ಇಲಾಖೆಯ ತಂಡವು ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಜೀವಜಲ ಪೊಟ್ಟಣವನ್ನು (ಓಆರ್‍ಎಸ್) ಉಚಿತವಾಗಿ ನೀಡುವುದರ ಜೊತೆಗೆ ದ್ರಾವಣವನ್ನು ತಯಾರಿಸುವ ವಿಧಾನವನ್ನು ಪ್ರತಿಯೊಬ್ಬ ತಾಯಂದಿರಿಗೂ ಹಾಗೂ ಕುಟುಂಬದ ಇತರೆ ಸದಸ್ಯರಿಗೆ ತಿಳಿಸಿಕೊಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ 192115 ಮಕ್ಕಳಿಗೆ 274266 ಓಆರ್‍ಎಸ್ ಪೊಟ್ಟಣ ವಿತರಣೆ ಗುರಿ ಹೊಂದಿದ್ದು, ಮನೆಗಳ ಭೇಟಿ ಸಂದರ್ಭದಲ್ಲಿ ಭೇದಿಯಿಂದ ಬಳಲುತ್ತಿರುವ ಮಕ್ಕಳಿಗೆ 14 ದಿನಗಳ ಕಾಲ ಜಿಂಕ್ ಮಾತ್ರೆಯನ್ನು ಸಹ ವಿತರಿಸಬೇಕು ಎಂದು ಸೂಚಿಸಿದರು. ಮನೆ ಭೇಟಿ ನೀಡುವ ವೈದ್ಯಕೀಯ ತಂಡವು ಕುಟುಂಬದ ಎಲ್ಲಾ ಸದಸ್ಯರಿಗೆ ಊಟದ ಪೂರ್ವದಲ್ಲಿ ಹಾಗು ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತೊಳೆಯುವಂತೆ ಜಾಗೃತಿ ಮೂಡಿಸಬೇಕು. ಆಹಾರ ಪದಾರ್ಥ ತಯಾರಿಸಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವುದು ಮತ್ತು ಬಿಸಿಯಾದ ಆಹಾರ ಸೇವಿಸುವಂತೆ ತಿಳಿಸಿದರು. ಸಮುದಾಯಕ್ಕೆ ಡಂಗೂರ, ಮೈಕಿಂಗ್, ಗುಂಪು ಸಭೆ ಹಾಗೂ ಜಾಥಾ ಕೈಗೊಳ್ಳುವ ಮೂಲಕ ಕಾರ್ಯಕ್ರಮ ಕುರಿತು ತಿಳಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿರುವ ಟಿ.ವಿ.ಗಳಲ್ಲಿ ವೀಡಿಯೋ ಕ್ಲಿಪಿಂಗ್ ಕಡ್ಡಾಯವಾಗಿ ಹಾಕುವ ಮೂಲಕ ಹೆಚ್ಚಾಗಿ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು. ಎಲ್ಲಾ ಗ್ರಾಮ ಪಂಚಾಯತ್‍ಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರನ್ನು ಕಾರ್ಯಕ್ರಮ ಚಾಲನೆಗೆ ಆಹ್ವಾನಿಸಿ, ಅಭಿಯಾನದ ಭಾಗವಾಗಿರುವ ಮಹಿಳಾ ಮತ್ತು ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯವರ ಸಂಪೂರ್ಣ ಸಹಕಾರ ಪಡೆಯಬೇಕು. ಯಾವುದೇ ನ್ಯೂನತೆಗಳಿಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್ ಅವರು ಮಾತನಾಡಿ ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕ, ನವಜಾತ ಶಿಶು ಸಪ್ತಾಹ ಹಾಗೂ ಸಾಂಸ್ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದರ ಮಾಹಿತಿ ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ರೆಹಮತ್, ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ, ಮಕ್ಕಳ ತಜ್ಞರಾದ ಬಾಲು ವೆಂಕಟೇಶ್, ವೈದ್ಯಾಧಿಕಾರಿಗಳಾದ ಡಾ.ಸುನಿತ, ಡಾ.ಮಂಜುನಾಥ, ಡಾ.ಅರುಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಮಹಾನಗರ ಪಾಲಿಕೆಯ ಕಿರಣ್, ಜಿಲ್ಲಾ ನಗರ ಅಭಿವೃದ್ದಿ ಕೋಶದ ಅರುಣ್, ಡಿಎನ್‍ಒ ಗಿರೀಶ್, ಆರ್.ಕೆ.ಎಸ್.ಕೆ ಸಂಯೋಜಕ ಮನೋಹರ್, ಎಎಸ್‍ಒ ಮಹಾದೇವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ