ಗುರುವಾರ, ನವೆಂಬರ್ 9, 2023

ಕೊಲೆ ಪ್ರಕರಣ; ಅಪರಾಧಿಗಳಿಗೆ ಶಿಕ್ಷೆ ಮತ್ತು ದಂಡ ಪ್ರಕಟ

ಬಳ್ಳಾರಿ,ನ.09(ಕರ್ನಾಟಕ ವಾರ್ತೆ): ನಗರದ ಬ್ರೂಸ್‍ಪೇಟೆ ಠಾಣೆ ವ್ಯಾಪ್ತಿಯಲ್ಲಿ 2021 ರ ಮೇ 03ರಂದು ನಡೆದ ಇಸ್ಮಾಯಿಲ್ ಎನ್ನುವ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪಿ.ಖಾಸೀಂ, ತುಕರಾಮ ಮತ್ತು ಮೆಹಮೂದ್ ಎಂಬುವರ ಅಪರಾಧ ರುಜುವಾತ ಹಿನ್ನಲೆಯಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ. ಎ.ಪಿ.ಎಂ.ಸಿ ಕೆಲಸಕ್ಕೆ ಹೋಗುವ ವಿಚಾರದಲ್ಲಿ ಮೃತ ಇಸ್ಮಾಯಿಲ್‍ನೊಂದಿಗೆ ಜಗಳ ತೆಗೆದುಕೊಂಡು ದೂರವಾಣಿ ಮೂಲಕ ಕಣೆಕಲ್ ಬಸ್ ನಿಲ್ದಾಣದ ಸಮೀಪ ಕರೆದು ಮಚ್ಚು ಕತ್ತಿಯಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ನಂತರ ಇಸ್ಮಾಯಿಲ್‍ನನ್ನು ತಪ್ಪಿಸಿಕೊಂಡು ಹೋಗದಂತೆ ಆರೋಪಿತರು ಎರಡು ಕೈಕಾಲುಗಳನ್ನು ಹಿಡಿದುಕೊಂಡು ಕಡಿದು ಕೊಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಬ್ರೂಸ್ ಪೇಟೆ ಠಾಣೆ ತನಿಖಾಧಿಕಾರಿಯವರು ಆರೋಪಿತರ ವಿರುದ್ಧ ಸಾಕ್ಷ್ಯಾಗಳನ್ನು ಸಂಗ್ರಹಿಸಿ ದೋಷಾರೋಪಣ ಪಟ್ಟಿಯನ್ನು ತಯಾರಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸದರಿ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಒಟ್ಟು 23 ಜನ ಸಾಕ್ಷಿದಾರರನ್ನು ವಿಚಾರಿಸಿ ಒಟ್ಟು 1 ರಿಂದ 60 ದಾಖಲೆಗಳನ್ನು ಗುರುತಿಸಿ ಹಾಗೂ ಮುದ್ದೆಮಾಲ್ 1 ರಿಂದ 13 ಗುರುತಿಸಲಾಗಿದೆ. ನಂತರ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ ವಾದ ವಿವಾದವನ್ನು ಆಲಿಸಿದ ನಂತರ ನ್ಯಾಯಾಲಯವು ಆರೋಪಿತರು ತಪ್ಪಿಸ್ಥತರು ಎಂದು ಪರಿಗಣಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಹೆಚ್.ಪುಷ್ಪಾಂಜಲಿದೇವಿ ಅವರು ಕಲಂ:302 ಐಪಿಸಿ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ 25,000 ವಿಧಿಸಿದ್ದು ಹಾಗೂ ಕಲಂ: 114 ಐಪಿಸಿ ಅಡಿಯಲ್ಲಿ 7 ವರ್ಷ ಕಠಿಣ ಶಿಕ್ಷೆ ಹಾಗೂ ದಂಡ 10,000 ರೂ.ಗಳನ್ನು ವಿಧಿಸಿದ್ದಾರೆ. ಆರೋಪಿತರು ದಂಡ ಕೊಡಲು ತಪ್ಪಿದಲ್ಲಿ ಪುನಃ 3 ವರ್ಷಗಳ ಹೆಚ್ಚಿನ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿರುತ್ತಾರೆ. ಆರೋಪಿತರಿಗೆ ನೀಡಿದ ದಂಡ 1,05,000 ರೂ.ಗಳನ್ನು ಮೃತನ ತಂದೆ ತಾಯಿಗೆ ನೀಡಬೇಕೆಂದು ಆದೇಶಿಸಿದ್ದಾರೆ. ಹಾಗೂ ಕಲಂ. 357(ಎ) ಸಿಅರ್‍ಪಿಸಿ ಅಡಿಯಲ್ಲಿ ಮೃತ ಕುಟಂಬಕ್ಕೆ ಪರಿಹಾರ ನೀಡಬೇಕೆಂದು ಸಹ ಜಿಲ್ಲಾ ಕಾನೂನು ನೇರವು ಸಮಿತಿಗೆ ಆದೇಶಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಬಿ.ಸುಂಕಣ್ಣ, ಪ್ರಧಾನ ಸರ್ಕಾರಿ ಅಭಿಯೋಜಕರು ಸರ್ಕಾರದ ಪರವಾಗಿ ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ