ಬುಧವಾರ, ಡಿಸೆಂಬರ್ 6, 2023
‘ಆಯುಷ್ಮಾನ್ ಭವ’ ಆರೋಗ್ಯ ಯೋಜನೆ ಪ್ರತಿಯೊಬ್ಬರೂ ಪಡೆದುಕೊಳ್ಳಿ: ಡಾ.ಸಂಧ್ಯಾ ಕಾಬ್ರಾ
ಬಳ್ಳಾರಿ,ಡಿ.06(ಕರ್ನಾಟಕ ವಾರ್ತೆ):
ಆಯುಷ್ಮಾನ್ ಭವ ಆರೋಗ್ಯ ಯೋಜನೆಯಡಿಯಲ್ಲಿ ಲಭ್ಯವಾಗುವ ಎಲ್ಲಾ ಚಿಕಿತ್ಸಾ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಭಾರತೀಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಎನ್‍ವಿಹೆಚ್‍ಪಿಸಿಯ ಡೆಪ್ಯೂಟಿ ಕಮಿಷನರ್ ಡಾ.ಸಂಧ್ಯಾ ಕಾಬ್ರಾ ಅವರು ಕರೆ ನೀಡಿದರು.
ಕೇಂದ್ರ ಸರ್ಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂಚಾರ ಅಂಗವಾಗಿ ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಚೆ ಇಲಾಖೆ, ಕೃಷಿ ಇಲಾಖೆ ಇವರ ಜಂಟಿ ಸಹಯೋಗದೊಂದಿಗೆ ಬಳ್ಳಾರಿ ತಾಲ್ಲೂಕಿನ ಚೆಳ್ಳಗುರ್ಕಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದೃಢ ದೇಶಕ್ಕಾಗಿ ಕಡುಬಡವರ ಆರೋಗ್ಯ ಸಂರಕ್ಷಣೆಗಾಗಿ ಆಯುಷ್ಮಾನ್ ಭವ ಯೋಜನೆ, ಕ್ಷಯರೋಗಿಗಳಿಗೆ ಉಚಿತ ಪೌಷ್ಟಿಕ ಆಹಾರ ಒದಗಿಸುವ ನಿಕ್ಷಯ ಪೆÇೀಷಣ ಅಭಿಯಾನ, ನಿಕ್ಷಯ ಮಿತ್ರದಡಿ ದಾನಿಗಳಿಂದ ಪೌಷ್ಟಿಕ ಆಹಾರ ಒದಗಿಸುವ ಅಭಿಯಾನಗಳ ಸದುಪಯೋಗ ಪಡೆಯಬೇಕು ಎಂದು ವಿನಂತಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಪ್ರಸ್ತುತ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಎಲ್ಲಾ ಗರ್ಭಿಣಿಯರಿಗೆ ಗ್ರಾಮೀಣ ಭಾಗದಲ್ಲಿ ರೂ.700 ಮತ್ತು ನಗರ ಪ್ರದೇಶದಲ್ಲಿ ರೂ.600 ಗಳನ್ನು ನೆರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ ರೂ.500 ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮುದಾಯದಲ್ಲಿ ಆಹಾರ ಸೇವನೆ, ಜೀವನ ಶೈಲಿಯ ಬದಲಾವಣೆ ಮಾಡಿಕೊಳ್ಳುವುದರ ಜೊತೆಗೆ ಮೂವತ್ತು ವರ್ಷ ಮೇಲ್ಪಟ್ಟವರು ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಕ್ಕಾಗಿ ಹತ್ತಿರದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಹೇಳಿದರು.
ನಬಾರ್ಡ ಬ್ಯಾಂಕ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆರ್.ಎಸ್.ಯುವರಾಜ್ ಕುಮಾರ ಮಾತನಾಡಿ, ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ, ಬೆಳೆವಿಮಾ ಯೋಜನೆ, ಸ್ಟಾರ್ಟ್ ಅಪ್ ಯೊಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಹಾಗೂ ಅಂಚೆ ಕಚೇರಿಗಳ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ಯೋಜನಾ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಉಜ್ವಲ ಗ್ಯಾಸ್ ಸಂಪರ್ಕ ಯೋಜನೆಯ ಲಾಭವನ್ನು ಪ್ರತಿಯೊಬ್ಬರು ಪಡೆಯಿರಿ ಎಂದು ಕೋರಿದರು.
ಕೆನರಾ ಬ್ಯಾಂಕ್ ಜಿಲ್ಲಾ ಮಾರ್ಗದರ್ಶಕ ಸೋಮನಗೌಡ ಐನಾಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎನ್‍ವಿಹೆಚ್‍ಸಿಪಿ ಸಲಹೆಗಾರರಾದ ಡಾ.ಬಾಲಸುಂದರಂ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ, ಜಿಲ್ಲಾ ಮಲೇರಿಯ ನಿಯಂತ್ರಣಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಎರ್ರಿತಾತ ಸ್ವಾಮಿ ದೇವಸ್ಥಾನದ ಟ್ರಸ್ಟಿ ಮರಿಬಸನಗೌಡ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಾವ್ಯಶ್ರೀ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಷಯರೋಗ ಪರೀಕ್ಷೆ ಕೈಗೊಂಡು, ರೋಗದ ಬಗ್ಗೆ ಜಾಗೃತಿ ನೀಡಲಾಯಿತು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)







ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ