ಸೋಮವಾರ, ಆಗಸ್ಟ್ 14, 2023
ಸೆ.09ರಿಂದ 12ರವರೆಗೆ ಕೃಷಿ ಮೇಳ; ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗಪಡೆದುಕೊಳ್ಳಲು ಮನವಿ
ಬಳ್ಳಾರಿ,ಆ.14(ಕರ್ನಾಟಕ ವಾರ್ತೆ):
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 2023 ರ ಕೃಷಿ ಮೇಳವನ್ನು ಸೆಪ್ಟಂಬರ್ 09 ರಿಂದ 12 ರವರೆಗೆ “ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು” ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಾಗುತ್ತಿದೆ. ರೈತರು, ರೈತ ಮಹಿಳೆಯರು, ಗ್ರಾಮೀಣ ಯುವಕರು ಹಾಗೂ ವಿಸ್ತರಣಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಸ್ತರಣಾ ನಿರ್ದೇಶನಾಲಯದ ಪ್ರಾಧ್ಯಾಪಕ(ಕೀಟಶಾಸ್ತ್ರ)ರಾದ ಡಾ.ಎನ್.ಎಸ್.ಎನ್.ಜಾಧವ ಅವರು ತಿಳಿಸಿದ್ದಾರೆ.
ಕೃಷಿಮೇಳ-2023 ರ ಪ್ರಮುಖ ಆಕರ್ಷಣೆಗಳು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ-2023, ಸಾವಯವ ಕೃಷಿ ಬೆಳೆಗಳು, ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ, ಇದರ ಜೊತೆಗೆ ಸಂಶೋಧನೆ ಮಾಡಿದ ವಿವಿಧ ತಳಿಗಳ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಮಾಹಿತಿ, ಹಿಂಗಾರು ಬೆಳೆಗಳ ತಾಂತ್ರಿಕತೆಗಳು, ಕಿಸಾನ್ ಡ್ರೋನ್ ಬಳಕೆ, ಬರ ನಿರ್ವಹಣಾ ತಾಂತ್ರಿಕತೆಗಳು, ಒಣ ಬೇಸಾಯ, ಜಲಾನಯನ ಅಭಿವೃದ್ಧಿ, ಮಣ್ಣು ಆರೋಗ್ಯ, ಜಲಸಾಕ್ಷರತೆ, ಜಲ ಸಂರಕ್ಷಣೆ ತಾಂತ್ರಿಕತೆಗಳು, ಕೃಷಿ ಹಾಗೂ ತೋಟಗಾರಿಕೆ ಹುಟ್ಟುವಳಿಗಳ ರಫ್ತು ಅವಕಾಶಗಳನ್ನು ಬಿಂಬಿಸುವ ಪ್ರದರ್ಶನಗಳು ಹಾಗೂ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಕೃಷಿಮೇಳದಲ್ಲಿ ಅಂದಾಜು 15 ಲಕ್ಷಕ್ಕಿಂತಲೂ ಹೆಚ್ಚು ರೈತರು, ರೈತ ಮಹಿಳೆಯರು, ವಿಸ್ತರಣಾ ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ಕೃಷಿ ಮೇಳದ ಅಂಗವಾಗಿ ಫಲ-ಪುಷ್ಪ ಮತ್ತು ತರಕಾರಿ ಬೆಳೆಗಳ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಕೃಷಿ ಅರಣ್ಯ ಪದ್ಧತಿಗಳು, ಪರಿಸರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು, ಯಶಸ್ವಿ ರೈತರೊಂದಿಗೆ ಸಂವಾದ, ಕೃಷಿ ಸಮಾಲೋಚನೆ, ವಿವಿಧ ಜಾನುವಾರುಗಳ ಪ್ರದರ್ಶನ, ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ಅನುಷ್ಟಾನಗೊಂಡಿರುವ ವಿವಿಧ ಪ್ರಾತ್ಯಕ್ಷಿಕೆಗಳ ವೀಕ್ಷಣೆ ಮತ್ತು ಪ್ರದರ್ಶನ, ವಸ್ತ್ರವಿನ್ಯಾಸ, ವಿವಿಧ ಸಂಘ-ಸಂಸ್ಥೆಗಳಿಂದ ಉತ್ಪನ್ನಗಳ ಮಾರಾಟ ಮಾಹಿತಿ ಇತ್ಯಾದಿ ವಿಶಿಷ್ಟ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಘಟಿಸಲಾಗುತ್ತಿದೆ.
ಆದಾಯ ದ್ವಿಗುಣಗೊಳಿಸುವ ಎಂಬ ಕಾರ್ಯಕ್ರಮದ ವಿಶೇಷ ಸಾಧನೆಗೈದ ರೈತರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೇ, ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪ್ರತಿ ಜಿಲ್ಲೆಯ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆಯರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾದ ವಿಷಯವಾಗಿದೆ. ಇದರೊಂದಿಗೆ ವಿವಿಧ ಅಭಿವೃದ್ಧಿ ಇಲಾಖೆಗಳು, ಬೀಜ, ಗೊಬ್ಬರ, ಕೀಟನಾಶಕ, ಉತ್ಪಾದಿಸುವ ಘಟಕಗಳು ಮತ್ತು ಅನೇಕ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು 450 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರಿಂದ ರೈತರಿಗೆ ಸೂಕ್ತ ಮಾಹಿತಿ ಹಾಗೂ ಕೃಷಿ ಪರಿಕರ ಲಭ್ಯವಾಗಲಿವೆ.
ಕೃಷಿಮೇಳದಲ್ಲಿ ಮಳಿಗೆಗಳನ್ನು ಕಾಯ್ದಿರಿಸಲು (0836-2214468, 8277478507), ಅಧ್ಯಕ್ಷರು, ವಸ್ತು ಪ್ರದರ್ಶನ ಸಮಿತಿ, ಕೃಷಿ ಮೇಳ-2023 ಕೃವಿವಿ, ಧಾರವಾಡ ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ