ಸೋಮವಾರ, ಆಗಸ್ಟ್ 14, 2023
ಮೈಮೇಲೆ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ತೋರಿಸಿ; ಇವು ಕುಷ್ಠರೋಗದ ಲಕ್ಷಣವಾಗಿರಬಹುದು
ಬಳ್ಳಾರಿ,ಆ.13(ಕರ್ನಾಟಕ ವಾರ್ತೆ):
ವ್ಯಕ್ತಿಯ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಮಚ್ಚೆಗಳು ಕಂಡು ಬಂದಲ್ಲಿ ನಿರ್ಲ್ಯಕ್ಷಿಸದೇ ಹತ್ತಿರದ ವೈದ್ಯರ ಬಳಿ ಒಮ್ಮೆ ತೋರಿಸಿ ಚಿಕಿತ್ಸೆ ಪಡೆಯಿರಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೂಲಕ ಸಂಡೂರು ತಾಲೂಕಿನ ಚಿಕ್ಕಕರೆಯಾಗಿನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಜಾಗೃತಿ ನೀಡುವಲ್ಲಿ ಅವರು ಮಾತನಾಡಿದರು.
ಬಹಳಷ್ಟು ಜನರು ಕುಷ್ಠರೋಗವು ಪ್ರಸ್ತುತ ದಿನಗಳಲ್ಲಿ ಇಲ್ಲ ಎಂದುಕೊಂಡಿದ್ದಾರೆ, ಆದರೆ ಪ್ರಾಚೀನ ಖಾಯಿಲೆಯಾಗಿರುವ ಈ ರೋಗವು ಇಂದಿಗೂ ಇದೆ. ಆದರೆ ಇದು ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖವಾಗುತ್ತದೆ ಎಂದು ಮನನ ಮಾಡಿದರು.
ಮೈಕ್ರೋ ಬ್ಯಾಕ್ಟೀರಿಯಂ ಲೇಪ್ರೆ ಎಂಬ ಸೂಕ್ಮಾಣುವಿನಿಂದ ಬರುವ ಇದು ಚರ್ಮ ಮತ್ತು ನರದ ಖಾಯಿಲೆಯಾಗಿದೆ. ಸಾಮಾನ್ಯವಾಗಿ ವ್ಯಕ್ತಿಯ ದೇಹದ ಮೇಲೆ ದಪ್ಪನಾದ ಅಥವಾ ಹೊಳೆಯುವ ಎಣ್ಣೆಯುಕ್ತ ಚರ್ಮ, ಗಂಟುಗಳು, ಕಣ್ಣಿನ ರೆಪ್ಪೆ ಮುಚ್ಚಲು ಸಾಧ್ಯವಾಗದಿರುವುದು, ಕೈ ಅಥವಾ ಕಾಲುಗಳಲ್ಲಿ ವಾಸಿಯಾಗದ ಹುಣ್ಣು, ಬೆರಳುಗಳು ಮಡಿಚಿಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನಿಸುವುದು ಅಥವಾ ಮರಗಟ್ಟುವಿಕೆ ಮುಂತಾದವುಗಳು ಕುಷ್ಠರೋಗದ ಲಕ್ಷಣಗಳಾಗಿದ್ದು, ರೋಗದ ಲಕ್ಷಣಗಳಾಧರಿಸಿ 6 ತಿಂಗಳು ಅಥವಾ 01 ವರ್ಷ ಅವಧಿಯ ಚಿಕಿತ್ಸೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಗುರುಗಳಾದ ಮದ್ಯಾಹ್ನಸ್ವಾಮಿ, ತಿಪ್ಪೇಸ್ವಾಮಿ, ಯರ್ರಿಸ್ವಾಮಿ, ಮಂಜುನಾಥ, ಅಮೃತವಾಹಿನಿ ಕಾಳಂಗೇರಿ ಸಂಚಾರಿ ಆರೋಗ್ಯದ ಸಿಬ್ಬಂದಿಯವರಾದ ಪಾರ್ವತಿ, ಯೂಸುಫ್, ಸುಮಲತಾ, ವಿಮಲಾಕ್ಷಿ, ಅಂಜಿನಿ, ಸತೀಶ್ ಬಾಬು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ