ಶುಕ್ರವಾರ, ಆಗಸ್ಟ್ 4, 2023

ಕಣ್ಣಿನ ಉರಿಊತ (ಮದ್ರಾಸ್ ಐ) ಸೋಂಕಿಗೆ ಸಾರ್ವಜನಿಕರು ಮುಂಜಾಗೃತೆ ವಹಿಸಿ: ಡಿಹೆಚ್‍ಒ ಡಾ.ಜನಾರ್ಧನ

ಬಳ್ಳಾರಿ,ಆ.04(ಕರ್ನಾಟಕ ವಾರ್ತೆ): ರಾಜ್ಯವು ಸೇರಿದಂತೆ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕಣ್ಣಿನ ಉರಿಊತ (ಮದ್ರಾಸ್ ಐ) ಸೋಂಕಿನ ಬಗ್ಗೆ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ. ಸೋಂಕು ಬಹುತೇಕ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಪ್ರಸ್ತುತ ಕಂಡುಬಂದಿದೆ. ಚಳಿಯ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ವೇಗವಾಗಿ ಹರಡುತ್ತವೆ. ಹಿರಿಯರಿಗಿಂತಲೂ ಮಕ್ಕಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ 3 ರಿಂದ 5 ದಿನಗಳವರೆಗೆ ಕಣ್ಣಿನ ಸೋಂಕು ಕಂಡುಬಂದು ಕಡಿಮೆಯಾಗುತ್ತದೆ. ಮುಂಜಾಗೃತ ಕ್ರಮವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಕಣ್ಣಿನ ಸೋಂಕು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 828 ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗದಿಂದ ನಿರಂತರವಾಗಿ ನಿಗಾವಹಿಸಲಾಗಿದೆ. ನೇತ್ರ ತಜ್ಞರೊಂದಿಗೆ ಹಾಗೂ ನೇತ್ರಾಧಿಕಾರಿಗಳೊಂದಿಗೆ ಸಂವಹನ ಕೈಗೊಂಡು ಕ್ರಮವಹಿಸಲಾಗುತ್ತಿದ್ದು, ಯಾವುದೇ ಗಂಭೀರ ಪ್ರಕರಣಗಳು ಇಲ್ಲಿಯವರೆಗೂ ವರದಿಯಾಗಿರುವುದಿಲ್ಲ. ಸಾರ್ವಜನಿಕರಿಗೆ ಜಾಗೃತಿ ನೀಡಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಸಭೆ ಸಮಾರಂಭಗಳಲ್ಲಿ, ಗುಂಪುಸಭೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. *ಪ್ರಕರಣಗಳ ವಿವರ:* ಜಿಲ್ಲೆಯಲ್ಲಿ ಇಲ್ಲಿಯವರೆಗೆ 828 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಬಳ್ಳಾರಿ-335, ಸಿರುಗುಪ್ಪ-109, ಕುರುಗೋಡು-56, ಸಂಡೂರು-186, ಕಂಪ್ಲಿ-142 ಪ್ರಕರಣಗಳು ವರದಿಯಾಗಿವೆ. *ಏನಿದು ಕಂಜಕ್ಟವೈಟೀಸ್(ಮದ್ರಾಸ್ ಐ)...?:* ಇದು ಒಂದು ವೈರಸ್‍ನಿಂದ ಹರಡುವ ಕಾಯಿಲೆಯಾಗಿದ್ದು, ಕಣ್ಣಿನ ಬಿಳಿಭಾಗವನ್ನು ಆವರಿಸುವ ಕಣ್ಣಿನ ಮುಂಭಾಗದಲ್ಲಿ ಇರುವ ಪದರದ ಸೋಂಕಿಗೆ (ಉರಿಊತ) ಇದಕ್ಕೆ ಕಂಜಕ್ಟವೈಟೀಸ್ ಎನ್ನುತ್ತಾರೆ. ಇದು ಹೆಚ್ಚಾಗಿ ಮಳೆಗಾಲದ ಆರಂಭ ಹಂತದಲ್ಲಿ ಕಂಡು ಬರುವ ಸಾಧ್ಯತೆಗಳು ಹೆಚ್ಚು ಇರುತ್ತದೆ. ಸೋಂಕಿತ ವ್ಯಕ್ತಿಯ ಕಣ್ಣಿನಿಂದ ಬರುವ ದ್ರವದ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದರಿಂದ ಬೇರೆಯವರಿಗೆ ಸೋಂಕು ಹರಡುವುದನ್ನು ತಡೆಗಟ್ಟಬಹುದು. ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು, ವಿಶೇಷವಾಗಿ ಶಾಲಾ, ಕಾಲೇಜು ವಸತಿ ನಿಲಯಗಳಲ್ಲಿ ಮತ್ತು ಅತಿಥಿ ಗೃಹಗಳಲ್ಲಿ (ಪಿ.ಜಿ) ಈ ಸೋಂಕು ಬೇಗ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. 3 ರಿಂದ 5 ದಿನಗಳಲ್ಲಿ ಗುಣಮುಖವಾಗುತ್ತದೆ ಹಾಗೂ ಎಲ್ಲಾ ವಯಸ್ಸಿನವರಲ್ಲಿ ಈ ಸೋಂಕು ಕಂಡುಬರುತ್ತದೆ ಎಂದು ತಿಳಿಸಿದ್ದಾರೆ. *ಕಂಜಕ್ಟವೈಟೀಸ್(ಮದ್ರಾಸ್ ಐ)ನ ಲಕ್ಷಣಗಳು:* ಕಣ್ಣು ಕೆಂಪಾಗುವಿಕೆ, ನೀರು ಸೋರುವಿಕೆ, ಅತಿಯಾದ ಕಣ್ಣೀರು, ಕಣ್ಣಿನಲ್ಲಿ ತುರಿಕೆ, ಸತತ ಕಣ್ಣು ನೋವು ಹಾಗೂ ಚುಚ್ಚುವಿಕೆ, ಬೆಳಕನ್ನು ನೋಡಲು ಸಾಧ್ಯವಾಗದಿರುವುದು, ದೃಷ್ಟಿ ಮುಸುಕಾಗುವುದು ಅಥವಾ ಮಂಜಾಗುವುದು, ಕಣ್ಣಿನ ಎರಡು ರೆಪ್ಪೆಗಳು ಕೀವು ಮಿಶ್ರಿತ ದ್ರವದಿಂದ ಅಂಟಿರುವುದು, ರೆಪ್ಪೆ ಊದಿಕೊಳ್ಳುವುದು ಇವೆಲ್ಲವೂ ಮದ್ರಾಸ್ ಐ ನ ಲಕ್ಷಣಗಳಾಗಿವೆ. *ಕಣ್ಣಿನ ಉರಿಊತ(ಮದ್ರಾಸ್ ಐ)ಗೆ ಚಿಕಿತ್ಸೆ:* ಸಾರ್ವಜನಿಕರು ಶುಚಿಯಾದ ಒದ್ದೆ ಮಾಡಿದ ಬಟ್ಟೆ ಅಥವಾ ಹತ್ತಿಯ ಉಂಟೆಗಳಿಂದ ಉಗುರು ಬೆಚ್ಚಗಿನ ನೀರಿನಿಂದ ಕಣ್ಣುಗಳನ್ನು ಸ್ವಚ್ಛಗೊಳಿಸಬೇಕು. ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಬಳಸಬೇಕು. ಮುಖ್ಯೋಪಾಧ್ಯಯರುಗಳು ಶಾಲಾ ವಿದ್ಯಾರ್ಥಿ ಅಥವಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಲ್ಲಿ ಅವರನ್ನು ಶಾಲೆಯಿಂದ ಪ್ರತ್ಯೇಕಿಸಿ ಚಿಕಿತ್ಸೆ ನೀಡಬೇಕು. ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಬೇರೆಯವರು ಬಳಸಬಾರದು. ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ಸೋಂಕಿತ ವ್ಯಕ್ತಿಗಳು ಕಪ್ಪು ಕನ್ನಡಕ ಬಳಸುವುದು ಉತ್ತಮ. *ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳು:* ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯವಂತ ವ್ಯಕ್ತಿಯು ಸೋಂಕುಳ್ಳ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕದಿಂದ ದೂರವಿರಬೇಕು. ಸೋಂಕಿತ ವ್ಯಕ್ತಿಯು ಬಳಸಿದ ಕರವಸ್ತ್ರ ಹಾಗೂ ಇತರೆ ವಸ್ತುಗಳನ್ನು ಬೇರೆಯವರು ಬಳಸಬಾರದು. ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆಯಬೇಕು. ಸೋಂಕಿತ ವ್ಯಕ್ತಿಗಳಿಗೆ ಶೀತ, ಕೆಮ್ಮು, ಜ್ವರ ಇದ್ದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಿರಿ. ತೀವ್ರತರದ ಸೋಂಕು ಉಂಟಾದಲ್ಲಿ ತಕ್ಷಣವೇ ನೇತ್ರ ತಜ್ಞರಿಂದ ಚಿಕಿತ್ಸೆ ಪಡೆಯಬೇಕು. *ಏನು ಮಾಡಬೇಕು:* ಸ್ವಚ್ಛವಾದ ನೀರಿನಿಂದ ಕಣ್ಣುಗಳನ್ನು ಶುಚಿಗೊಳಿಸಬೇಕು, ಸೋಂಕು ಕಂಡುಬಂದ ತಕ್ಷಣ ವೈದ್ಯರಿಂದ ಚಿಕಿತ್ಸೆ/ಸಲಹೆ ಪಡೆಯಬೇಕು, ಸೋಂಕಿತ ವ್ಯಕ್ತಿಗಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು, ಸೋಂಕಿತ ವ್ಯಕ್ತಿಗಳು ಬಳಸಿದ ಕರವಸ್ತ್ರ, ಟವೆಲ್, ಇನ್ನಿತರೆ ವಸ್ತುಗಳನ್ನು ಸಂಸ್ಕರಿಸಿ ಬಳಸಬೇಕು. *ಏನು ಮಾಡಬಾರದು:* ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು, ಸ್ವಯಂ ಚಿಕಿತ್ಸಾ ವಿಧಾನಗಳನ್ನು ಮಾಡಬಾರದು, ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಬೇಕು, ಸೋಂಕಿತ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮುಟ್ಟಬಾರದು. ಸಾರ್ವಜನಿಕ ಹಿತದೃಷ್ಟಿಯಿಂದ ಕಣ್ಣಿನ ಸೋಂಕು ಇರುವ ವ್ಯಕ್ತಿಗಳು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಆರೈಕೆ ಪಡೆಯಬೇಕು. ಚಿಕ್ಕ ಮಕ್ಕಳನ್ನು ಹತ್ತಿರ ಕರೆದುಕೊಳ್ಳಬಾರದು. ಮತ್ತು ಅಗತ್ಯವೆನಿಸಿದಾಗ ಮಾತ್ರ ಸೂಕ್ತ ಮುಂಜಾಗೃತೆಯೊಂದಿಗೆ ಮನೆಯಿಂದ ಹೊರಗಡೆ ಬರಬೇಕು ಎಂದು ಡಿಹೆಚ್‍ಒ ಡಾ.ಜನಾರ್ಧನ ಅವರು ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ