ಗುರುವಾರ, ಮಾರ್ಚ್ 16, 2023

ಬಳ್ಳಾರಿಯಲ್ಲಿ ವಿಶ್ವ ಗ್ರಾಹಕರ ದಿನಾಚರಣೆ ಗ್ರಾಹಕರು ತಮ್ಮ ಹಕ್ಕುಗಳ ಕುರಿತು ಜಾಗೃತರಾಗಿರಿ: ನ್ಯಾ.ಸತೀಶ ಬಾಳಿ ಸಲಹೆ ಬಳ್ಳಾರಿ,ಮಾ.15(ಕರ್ನಾಟಕವಾರ್ತೆ): ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಮೊದಲು ಅರಿತುಕೊಳ್ಳಬೇಕು. ಅಂದಾಗ ಮಾತ್ರ ಮೋಸಗೊಳಗಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸತೀಶ ಜೆ.ಬಾಳಿ ಅವರು ಹೇಳಿದರು. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೆ.ಎಫ್.ಸಿ.ಎಸ್.ಸಿ ಇವರ ಸಂಯುಕ್ತಾಶ್ರಯದಲ್ಲಿ “ಶುದ್ಧ ಶಕ್ತಿ ಪರಿವರ್ತನೆ” ಎಂಬ ಘೋಷವಾಕ್ಯದೊಂದಿಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎಎ ಫುಟ್‍ಬಾಲ್ ಮೈದಾನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರು ಮೊದಲು ವ್ಯವಹಾರ ಚಟುವಟಿಕೆಗಳಲ್ಲಿರುವ ಹಕ್ಕುಗಳ ಕುರಿತು ಅರಿತುಕೊಳ್ಳುವ ಕೆಲಸ ಮಾಡಬೇಕು. ಗ್ರಾಹಕರ ದಿನಾಚರಣೆಯು ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳಲು ಇರುವ ವಿಶೇಷ ವೇದಿಕೆ ಎಂದರು. ಇತ್ತೀಚಿನ ದಿನಮಾನಗಳಲ್ಲಿ ಡಿಜಿಟಲ್ ಪೇಮೆಂಟ್‍ನ್ನು ಎಲ್ಲೆಡೆಯು ನಾವು ಕಾಣುತ್ತಿದ್ದೇವೆ. ಇಡೀ ಜಗತ್ತೆ ಒಂದು ರೀತಿಯಲ್ಲಿ ಡಿಜಿಟಲ್ ಪೇಮೆಂಟ್ ಜಮಾನ ಆಗಿಬಿಟ್ಟಿದೆ. ತ್ವರಿತಗತಿಯಲ್ಲಿ ಹಣ ವರ್ಗಾವಣೆಗೆ ಇ-ಡಿಜಿಟಲ್ ಪೇಮೆಂಟ್ ಎಷ್ಟು ಅನುಕೂಲಕರವೋ, ಮೈಮರೆತರೆ ಇದರಿಂದ ಮೋಸಕ್ಕೆ ಒಳಗಾಗುವುದುಂಟು ಎಂದು ಹೇಳಿದರು. ಡಿಜಿಟಲ್ ಪೇಮೆಂಟ್ ಬಗ್ಗೆ ಮಾಹಿತಿ ಗೊತ್ತಿಲ್ಲದವರೂ ಯಾವುದೇ ಕಾರಣಕ್ಕೂ ಈ ಡಿಜಿಟಲ್ ಪೇಮೆಂಟ್‍ನ್ನು ಉಪಯೋಗಿಸಬೇಡಿ, ಗ್ರಾಹಕರು ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ತಮ್ಮ ಖಾತೆಯ ವಿವರಗಳನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬೇಡಿ ಎಂದು ಸಲಹೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ತಿಪ್ಪೇಸ್ವಾಮಿ.ಎನ್ ಅವರು ಮಾತನಾಡಿ, ಗ್ರಾಹಕರ ಹಕ್ಕುಗಳು ಮತ್ತು ಅಗತ್ಯತೆಗಳ ಬಗ್ಗೆ, ಗ್ರಾಹಕರು ತಮಗಾಗುವ ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ಜಾಗತೀಕವಾಗಿ ಜಾಗೃತಿ ಮೂಡಿಸಲು ಈ ವಿಶ್ವ ಗ್ರಾಹಕರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಗ್ರಾಹಕರು ಮೋಸಗೊಳಗಾಗುವುದನ್ನು ತಪ್ಪಿಸಲು ಮತ್ತು ಅವರಿಗೆ ಸಮರ್ಪಕವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ ಎಂದು ವಿವರಿಸಿದರು. ಗ್ರಾಹಕರ ಹಕ್ಕುಗಳ ಕುರಿತು ಮತ್ತು ವಿಶ್ವ ಗ್ರಾಹಕರ ದಿನಾಚರಣೆಯ ಪ್ರಾಮುಖ್ಯತೆ ಕುರಿತು ಮಾಧ್ಯಮಗಳು ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು. ಗ್ರಾಹಕರಿಗೆ ತಮ್ಮ ಹಕ್ಕುಗಳಿಗೆ ಧಕ್ಕೆ ಬಂದಾಗ ಸಂಬಂಧಿಸಿದ ಇಲಾಖೆಗೆ ಅಥವಾ ಜಿಲ್ಲಾ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಕೊಡುವ ಕೆಲಸ ಮಾಡಬೇಕು. ಗ್ರಾಹಕರಿಗೆ ಅನ್ಯಾಯವೆಸಗಿದವರಿಗೆ ಶಿಕ್ಷೆ ಕೊಡಿಸುವ ಕೆಲಸವೂ ಪರಿಣಾಮಕಾರಿಯಾಗಿ ಆಗಬೇಕು; ಅಂದಾಗ ಮಾತ್ರ ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಉದ್ದೇಶ ಈಡೇರಲು ಸಾಧ್ಯ ಎಂದರು. ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲರಾದ ಅಂಕಲಯ್ಯ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಮಾಜ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕುಮಾರ ಅವರು ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಎಸ್.ಎನ್. ರುದ್ರೇಶ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಸೋಮಶೇಖರಪ್ಪ ಕೆ.ಹಂದಿಗೋಳ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ, ವಕೀಲೆ ತ್ರಿವೇಣಿ ಪತ್ತಾರ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಮೊಹಮ್ಮದ್ ಖಿಜರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಆಶಾಕಾರ್ಯಕರ್ತೆಯರು ಮತ್ತು ಇತರರು ಹಾಜರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ