ಮಂಗಳವಾರ, ಮಾರ್ಚ್ 21, 2023
ಮಾಧ್ಯಮ ಪ್ರತಿನಿಧಿಗಳಿಗೆ ಪರಿಚಯ ಮತ್ತು ಜಾಗೃತಿ ಕಾರ್ಯಾಗಾರ
ಮಾಧ್ಯಮಗಳು ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಲಿ: ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ
ಬಳ್ಳಾರಿ,ಮಾ.21(ಕರ್ನಾಟಕ ವಾರ್ತೆ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಸೇವೆಗಳು ಸೇರಿದಂತೆ ಎಲ್ಲಾ ಸೇವೆಗಳ ಮಾಹಿತಿಯನ್ನು ಜನರಿಗೆ ಸಕಾಲದಲ್ಲಿ ಅರಿವು ಮೂಡಿಸಲು ಮಾಧ್ಯಮಗಳು ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಲಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾಹಿತಿ ಶಿಕ್ಷಣ ಸಂವಹನ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ಪರಿಚಯ ಮತ್ತು ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಆರೋಗ್ಯ ಇಲಾಖೆಯಲ್ಲಿ ಲಭಿಸುವ ಎಲ್ಲಾ ಸೇವೆಗಳ ಮಾಹಿತಿಯು ಮಾಧ್ಯಮಗಳಿಂದ ಮಾತ್ರ ಜನರಿಗೆ ತಲುಪಲು ಸಾಧ್ಯ. ಮಾಧ್ಯಮ ಪ್ರತಿನಿಧಿಗಳಿಗೆ ಸೇವೆಗಳ ಮಾಹಿತಿಯು ತಲುಪಿದರೆ ಎಲ್ಲಾ ಜನ ಸಾಮಾನ್ಯರಿಗೆ ತಲುಪಿದಂತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದೇ ಆರೋಗ್ಯ ಇಲಾಖೆಯ ಕರ್ತವ್ಯವಾಗಿದ್ದು, ಸಮಾಜದಲ್ಲಿ ಆರೋಗ್ಯ ಸೇವೆಗಳ ಬಗ್ಗೆ ಇರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂದೇಶಗಳ ಬಗ್ಗೆ ಜನರಿಗೆ ಮಾಧ್ಯಮಗಳಿಂದ ಮಾತ್ರ ತಿಳಿಸಲು ಸಾಧ್ಯ ಎಂದರು.
ಕೊರೋನ ಸಂದರ್ಭದಲ್ಲಿ ಮಾಧ್ಯಮದವರು ತಮ್ಮ ಶ್ರಮ ಮೀರಿ ಕೆಲಸ ನಿರ್ವಹಿಸಿದ್ದಾರೆ. ಭಯ ಪೀಡಿತ ಕೊರೋನ ಸಾಂಕ್ರಾಮಿಕ ರೋಗದ ಕುರಿತು ಜನರಲ್ಲಿ ಭಯ ಮುಕ್ತರನ್ನಾಗಿ ಮಾಡಿ ಜೀವಿಸಲು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯ ಎಲ್ಲಾ ಉಚಿತ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಲು ಮಾಧ್ಯಮದವರ ಪಾತ್ರ ಬಹುಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಸೇವೆಗಳ ಮಾಹಿತಿಯ ಅರಿವನ್ನು ಜನರಿಗೆ ತಲುಪಲು ಹಾಗೂ ದೈನಂದಿನ ಚಟುವಟಿಕೆಗಳನ್ನು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಮಾಧ್ಯಮದವರ ತಮ್ಮ ಸಹಕಾರ ಅಗತ್ಯವಾಗಿದೆ ಎಂದರು.
ವಿವಿಧ ವಿಭಾಗದ ಅಧಿಕಾರಿಗಳಿಂದ ಕಾರ್ಯಾಗಾರ: ಕಾರ್ಯಾಗಾರದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಆರ್.ಅನೀಲ್ ಕುಮಾರ್ ಅವರು ತಾಯಿಕಾರ್ಡ್, ಗರ್ಭಿಣಿ ಆರೈಕೆ, ಜನನಿ ಸುರಕ್ಷಾ ಯೋಜನೆ, ಪೌಷ್ಠಿಕ ಪುನರ್ವಸತಿ ಕೇಂದ್ರ, ಸ್ನೇಹ ಕ್ಲಿನಿಕ್ ಇತರೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ವಿಶ್ವ ಕ್ಷಯರೋಗ ದಿನವನ್ನು ಪ್ರತಿವರ್ಷ ಮಾರ್ಚ್ 24ರಂದು ಆಚರಣೆ ಮಾಡಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯವು ‘ಹೌದು, ನಾವು ಕ್ಷಯವನ್ನು ಕೊನೆಗಳಿಸಬಹುದು' ಎಂಬುದಾಗಿದೆ. ಕ್ಷಯರೋಗ ನಿರ್ಮೂಲನೆಯಲ್ಲಿ ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯು 3 ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುμÁ್ಠನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಕೀಟ ಶಾಸ್ತ್ರಜ್ಞೆ ಡಾ.ನಂದಿನಿ ಕಡಿ ಅವರು ತಮ್ಮ ವಿಭಾಗ ಅನುμÁ್ಟನ ಕಾರ್ಯಕ್ರಮಗಳ ಬಗ್ಗೆ ವಿಷಯ ಮಂಡನೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಸೇವೆಗಳ ಕುರಿತ ಮಾಹಿತಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ವೇಳೆ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಗುರುನಾಥ.ಬಿ ಚೌವ್ಹಾಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಡಾ.ಮಯೂರಿ ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)









ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ