ಶುಕ್ರವಾರ, ಮಾರ್ಚ್ 17, 2023
ಹೆಚ್‍ಐವಿ, ಏಡ್ಸ್ ನಿರ್ಮೂಲನೆ ಮಾಡಲು ರೆಡ್ ರಿಬ್ಬನ್ ಕ್ಲಬ್ ಒಂದು ಪ್ರಬಲ ಅಸ್ತ್ರ: ಡಾ.ಮಂಜುನಾಥ ರೆಡ್ಡಿ
ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ರೆಡ್ ರಿಬ್ಬನ್ ಕ್ಲಬ್ ಚಟುವಟಿಕೆಗಳ ಮೂಲಕ ಯುವ ವಿದ್ಯಾರ್ಥಿಗಳಲ್ಲಿ ಏಡ್ಸ್ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತದೆ. ಹೆಚ್‍ಐವಿ, ಏಡ್ಸ್ ನಿರ್ಮೂಲನೆ ಮಾಡಲು ರೆಡ್ ರಿಬ್ಬನ್ ಕ್ಲಬ್ ಒಂದು ಪ್ರಬಲ ಅಸ್ತ್ರವಾಗಿದ್ದು, ಯುವ ಸಮುದಾಯ ಕ್ರಿಯಾಶೀಲವಾಗಿ ಭಾಗವಹಿಸಿ ಹೆಚ್.ಐ.ವಿ, ಏಡ್ಸ್ ಬಗ್ಗೆ ಮಾಹಿತಿ ಪಡೆದು ತಮ್ಮನ್ನು ಮತ್ತು ಸಮಾಜವನ್ನು ಹೆಚ್.ಐ.ವಿ ಮುಕ್ತ ಮಾಡಲು ಶ್ರಮಿಸಬೇಕು ಎಂದು ಸರಳಾದೇವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥರೆಡ್ಡಿ ಹೆಚ್.ಕೆ ಕರೆ ನೀಡಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ನಿರ್ವಹಣಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ರೆಡ್‍ರಿಬ್ಬನ್ ಕ್ಲಬ್ ಚಟುವಟಿಕೆಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ದಸ್ತಗೀರಸಾಬ್ ದಿನ್ನಿಯವರು ಮಾತನಾಡಿ, ಹೆಚ್.ಐ.ವಿ ಸೊಂಕಿತರಿಗೆ ಸಾಮಾಜಿಕ ಕಳಕಳಿ ಮತ್ತು ನೈತಿಕ ಬೆಂಬಲ ನೀಡಿ ಅವರು ಸಾಮಾನ್ಯರಂತೆ ಬದುಕಲು ನೆರವಾಗಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಅತ್ಯಂತ ಕ್ರಿಯಾಶೀಲವಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿವೆ. ಈ ಘಟಕಗಳ ಸೇವೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹೆಚ್.ಐ.ವಿ, ಏಡ್ಸ್ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಮಂಜುನಾಥ ಉಲವತ್ತಿ ಶೆಟ್ಟರ್, ರಮಾಬಾಯಿ, ಲಕ್ಕಣ್ಣ ಸೇರಿದಂತೆ ಇತರರು ಇದ್ದರು.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ