ಗುರುವಾರ, ಮಾರ್ಚ್ 30, 2023
ರಾಷ್ಟ್ರಮಟ್ಟದ ಗುಣಮಟ್ಟ ಖಾತರಿ ಕಾಯಕಲ್ಪ ಪ್ರಶಸ್ತಿಗೆ ಹಂದಿಹಾಳು ಆರೋಗ್ಯ ಕ್ಷೇಮ ಕೇಂದ್ರ ಆಯ್ಕೆ
ಬಳ್ಳಾರಿ,ಮಾ.30(ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶದಲ್ಲಿ ಹರಡುವ ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಹಾಗೂ ಇತರೆ ಆರೋಗ್ಯ ಸೇವೆ ನೀಡುವ ಉದ್ದೇಶದ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಾರ್ಯವೈಖರಿ ಮತ್ತು ಸೇವೆಯ ಗುಣಮಟ್ಟವನ್ನು ಆಧರಿಸಿ ನೀಡುವ ಸ್ವಚ್ಚ ಭಾರತ ಅಭಿಯಾನದ ರಾಷ್ಟ್ರಮಟ್ಟದ ಗುಣಮಟ್ಟ ಖಾತರಿ ಕಾಯಕಲ್ಪ ಪ್ರಶಸ್ತಿಗೆ ಬಳ್ಳಾರಿ ಗ್ರಾಮೀಣ ವ್ಯಾಪ್ತಿಯ ಹಂದಿಹಾಳು ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆಯ್ಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲಬಾರಿಗೆ ಈ ಪ್ರಶಸ್ತಿ ಪಡೆದ ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಆರೋಗ್ಯ ಕೇಂದ್ರಗಳು ಪ್ರಶಸ್ತಿಗೆ ಭಾಜನವಾಗುವ ರೀತಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುವ ಈ
ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಬಿಎಸ್‍ಸಿ ನರ್ಸಿಂಗ್ ವಿದ್ಯಾರ್ಹತೆಯ ಶೂಶ್ರೂಷಣಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಪ್ರಸ್ತುತ ಹಂದಿಹಾಳದಲ್ಲಿ ಮೇರಿ ಮೊನಿಕಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ನೀಡಿದ ಸೇವೆಗಳನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ತಂಡಗಳು ಬೇಟಿ ನೀಡಿ ಮೌಲ್ಯಾಂಕನವನ್ನು ಕೈಗೊಂಡು ಅಂತಿಮವಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು, ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಅತ್ಯಲ್ಪ ಅವಧಿಯಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಒದಗಿಸಿದ್ದು ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಲು ಸಹಕಾರಿಯಾಯಿತು ಎಂದು ಸ್ಮರಿಸಿದರು.
ಪ್ರಶಸ್ತಿ ದೊರಕುವ ರೀತಿಯಲ್ಲಿ ಕಾರ್ಯನಿರ್ವಹಿಸಿದ ಸಮುದಾಯ ಆರೋಗ್ಯ ಅಧಿಕಾರಿ ಮೇರಿ ಮೊನಿಕಾ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸುವರ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ನೀಲಕಂಠಪ್ಪ, ಕೊರ್ಲಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನೌಸೀನ್ ಮರಿಯಂ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ, ಜಿಲ್ಲಾ ಕಾಯಕಲ್ಪ ತಂಡ ಮತ್ತು ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ತಂಡಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಜಿಲ್ಲಾ ಗುಣಮಟ್ಟ ವ್ಯವಸ್ಥಾಪಕಿ ನಾಗವೇಣಿ, ಜಿಲ್ಲಾ ಎನ್‍ಸಿಡಿ ಸಲಹೆಗಾರರಾದ ಡಾ.ಜಬೀನಾ ತಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ