ಶುಕ್ರವಾರ, ಮಾರ್ಚ್ 24, 2023
ವಿಶ್ವ ಕ್ಷಯರೋಗ ದಿನಾಚರಣೆ
ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ: ಡಿಹೆಚ್‍ಒ ಡಾ.ಜರ್ನಾಧನ
ಬಳ್ಳಾರಿ,ಮಾ.23(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅಗತ್ಯ, ಈ ನಿಟ್ಟಿನಲ್ಲಿ 1 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 192 ಕ್ಷಯರೋಗಿಗಳನ್ನು ಪತ್ತೆ ಹಚ್ಚುವ ಗುರಿ ಹೊಂದಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜರ್ನಾಧನ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಹೌದು! ನಾವು ಕ್ಷಯರೋಗವನ್ನು ಕೊನೆಗೊಳಿಸಬಹುದು” ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿಗಳ ಘೋಷಣೆಯಂತೆ 2025 ಕ್ಕೆ ಭಾರತ ದೇಶವನ್ನು ಕ್ಷಯ ಮುಕ್ತ ಮಾಡಲು ಪಣತೊಟ್ಟಿರುವುದರಿಂದ ದೇಶದ ಎಲ್ಲಾ ನಾಗರೀಕರು ಕೈಜೋಡಿಸುವ ಮೂಲಕ ಟಿ.ಬಿ ಯನ್ನು ಸೋಲಿಸಿ ದೇಶವನ್ನು ಗೆಲ್ಲಿಸಿ ಎಂದು ಕರೆ ನೀಡಿರುತ್ತಾರೆ ಎಂದು ತಿಳಿಸಿದರು.
ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು ಕ್ಷಯರೋಗದ ಸಾಮಾನ್ಯ ಲಕ್ಷಣವಾಗಿದೆ. ಸಂಜೆ ವೇಳೆ ಜ್ವರ ಬರುವುದು, ರಾತ್ರಿ ವೇಳೆ ಬೆವರುವುದು. ಎದೆ ನೋವು ಕೆಲವೊಮ್ಮೆ ಕಫದ ಜೊತೆ ರಕ್ತ ಬೀಳುವುದು. ಹಸಿವಾಗದಿರುವುದು ತೂಕ ಕಡಿಮೆಯಾಗುವುದು. ಮಕ್ಕಳಲ್ಲಿ ಸತತವಾಗಿ ತೂಕ ಕಡಿಮೆಯಾಗುವುದು ಅಥವಾ ಹೆಚ್ಚದೇ ಇರುವುದು, ಚಿಕಿತ್ಸೆಗೆ ಬಗ್ಗದ ಅತಿಸಾರ ಬೇದಿ, ಕುತ್ತಿಗೆ ಬಗುಲುಗಳಲ್ಲಿ ಗಡ್ಡೆ ಸೇರಿದಂತೆ ಈ ಲಕ್ಷಣಗಳಿದ್ದರೆ ತಕ್ಷಣವೇ ನಿಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ 2 ಬಾರಿ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ.ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತೀ ಮಾಸಿಕ ಸಭೆಗಳಲ್ಲಿ ಕ್ಷಯರೋಗಿಗಳ ಪತ್ತೆ, ಚಿಕಿತ್ಸೆ ಹಾಗೂ ಮರಣ ಹೊಂದಿರುವ ಶೇಕಡವಾರು ಕಡಿಮೆಗೊಳಿಸಲು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಮಾರ್ಗದರ್ಶನ ನೀಡುತ್ತಿರುವುದರಿಂದ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಸಿಕೊಂಡು ಹೋಗಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನಮ್ಮ ಸಿಬ್ಬಂದಿಗಳು ನಿರಂತರವಾಗಿ ಕ್ಷೇತ್ರಗಳಲ್ಲಿ ಕ್ಷಯರೋಗಿಗಳ ಅನುಸರಣೆ ಮಾಡುತ್ತಿರುವುದರಿಂದ ಕ್ಷಯವನ್ನು 2025ರ ವೇಳೆಗೆ ಕ್ಷಯ ಮುಕ್ತ ಬಳ್ಳಾರಿ ಮಾಡಬಹುದೆಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪಂಪಾಪತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಹೆಚ್ಚಾಗಿದ್ದು, ಕ್ಷಯರೋಗಕ್ಕೆ ತುತ್ತಾಗುವ ದುರ್ಬಲ ವರ್ಗದ ಜನರೆಂದು ಕೇಂದ್ರ ಕ್ಷಯ ವಿಭಾಗದಿಂದ ರಾಷ್ಟ್ರೀಯ ಕಾರ್ಯತಂತ್ರದ ಯೋಜನೆ ಅಡಿಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡಲು ಯಾವುದಾದರು ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ್‍ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುμÁ್ಠನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ವೀರೇಶ್.ಹೆಚ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ಗಮನ ಸೆಳೆದ ಜಾಗೃತಿ ಜಾಥಾ:* ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಜಿಲ್ಲಾ ಆಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾವು ನೋಡುಗರನ್ನು ಗಮನ ಸೆಳೆಯಿತು.
ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಚಾಲನೆ ನೀಡಿದರು. ಜಾಥಾವು ಜಿಲ್ಲಾ ಆಸ್ಪತ್ರೆ ಅವರಣದಿಂದ ಆರಂಭವಾಗಿ ಸಂಗಮ ವೃತ್ತದಿಂದ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿ ನಂತರ ಮರಳಿ ಜಿಲ್ಲಾ ಆಸ್ಪತ್ರೆಯವರೆಗೆ ಸಾಗಿತು. ಜಾಥಾದಲ್ಲಿ 200-250 ಎ.ಎನ್.ಎಂ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ