ಮಂಗಳವಾರ, ಅಕ್ಟೋಬರ್ 31, 2023
ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಯಶಸ್ವಿಗೊಳಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ಭಾರತ” ನನಸಾಗಿಸಲು, ಕುಷ್ಠರೋಗ ಪ್ರಕರಣಗಳಿಂದ ಉಂಟಾಗುವ ಅಂಗವಿಕಲತೆಯನ್ನು ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಮುಂಜಾಗ್ರತೆ ಕ್ರಮವಹಿಸಿ ಪತ್ತೆ ಹಚ್ಚುವ ಉದ್ದೇಶದಿಂದ ನವೆಂಬರ್ 15 ರಿಂದ ಡಿಸೆಂಬರ್ 2 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಅಧಿಕಾರಿಗಳಿಗೆ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಆರೋಗ್ಯ ಇಲಾಖೆಯ ಸಭೆಯಲ್ಲಿ ಅವರು ಮಾತನಾಡಿ, ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಮೈಕೋಬ್ಯಾಕ್ಟೀರಿಯ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ. ಇದು ಚಿಕಿತ್ಸೆ ಪಡೆಯದೇ ಇರುವ ಕುಷ್ಠರೋಗಿಯು ಕೆಮ್ಮಿದಾಗ ಸೀನಿದಾಗ ತುಂತುರು ಹನಿಗಳು ಉಸಿರಾಡುವ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದೆ. ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಈ ವಿಶೇಷ ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಮನೆ-ಮನೆ ಭೇಟಿ ಮಾಡಿ ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಿ ಮಾಹಿತಿ ಸಂಗ್ರಹಿಸುತ್ತಾರೆ. ಅವರು ರೆಫರಲ್ ಫಾರಂ ನೀಡಿ ಜಿಲ್ಲೆಯ ವೈದ್ಯಾಧಿಕಾರಿಗಳ ಬಳಿ ತಪಾಸಣೆ ಮಾಡಿಸಿಕೊಳ್ಳಲು ಶಿಫಾರಸ್ಸು ಮಾಡುತ್ತಾರೆ. ತಪಾಸಣೆ ನಂತರ ಕುಷ್ಠರೋಗ ಎಂದು ಧೃಡಪಟ್ಟ ಮೇಲೆ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ ಕಂಡುಬಂದಿರುವ 77 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಅಭಿಯಾನವನ್ನು ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಒಟ್ಟು 2,75,452 ಮನೆಗಳ ತಪಾಸಣಾ ಸಮೀಕ್ಷೆ ಕೈಗೊಳ್ಳಲಾಗುವುದು. ಈ ತಪಾಸಣಾ ಸಮೀಕ್ಷೆ ಮಾಡಲು 1211 ಜನರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಇರುತ್ತಾರೆ. ಈ ತಂಡಗಳ ಕಾರ್ಯವನ್ನು ಮರು ಮೇಲ್ವಿಚಾರಣೆ ಮಾಡಲು 241 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಖ್ಯವಾಗಿ ವಲಸೆ ಕಾರ್ಮಿಕರು ಕಾರ್ಯನಿರ್ವಹಿಸುವ ಇಟ್ಟಿಗೆ ಬಟ್ಟಿಗಳು, ಬಿಂಚೆ ಮಶಿನ್‍ಗಳು, ಸಿಮೆಂಟ್ ಬ್ರಿಕ್ಸ್‍ಗಳು, ರೈಸ್ ಮಿಲ್‍ಗಳು, ಇಂಡಸ್ಟ್ರಿಗಳು ಇತರೆ 101 ಸ್ಥಳಗಳನ್ನು ಗುರುತಿಸಲಾಗಿದೆ, ಇಲ್ಲಿ 10 ತಂಡಗಳು ಭೇಟಿ ನೀಡಿ ತಪಾಸಣಾ ಸಮೀಕ್ಷೆ ಮಾಡುತ್ತಾರೆ. ಈ ತಂಡಗಳನ್ನು 5 ಮೇಲ್ವಿಚಾರಕರು ಮರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ವಿವರಿಸಿದರು.
ತಪಾಸಣೆ ಮಾಡಲು ತಂಡಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನದ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ್, ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
--------
ಹೆಚ್‍ಟಿ, ಇಹೆಚ್‍ಟಿ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆ ನ.07ರಂದು
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಗೆ ಬರುವ ಬಳ್ಳಾರಿ ಗ್ರಾಮೀಣ, ಕುರುಗೋಡು, ಸಂಡೂರು ಮತ್ತು ಸಿರುಗುಪ್ಪ ತಾಲ್ಲೂಕುಗಳ ಎಲ್ಲಾ ಹೆಚ್‍ಟಿ ಮತ್ತು ಇಹೆಚ್‍ಟಿ ವಿದ್ಯುತ್ ಗ್ರಾಹಕರ ಕುಂದುಕೊರತೆ ಸಭೆಯನ್ನು ನ.07ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಮೋತಿ ವೃತ್ತದ ಬುಡಾ ಕಾಂಪ್ಲೆಕ್ಸ್ ಹಿಂಭಾಗದ ಜೆಸ್ಕಾಂ ವಲಯ ಕಚೇರಿ ಮೊದಲನೇ ಮಹಡಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ನ.02ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ನಗರ ಜೆಸ್ಕಾಂ ಉಪವಿಭಾಗ-2ರ 11ಕೆ.ವಿ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್‍ಗಳ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನ.02ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಇಂಜಿನಿಯರ್ ಅಶೋಕ ರೆಡ್ಡಿ ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳಿವು:*
ಎಫ್-1 ಫೀಡರ್ ವ್ಯಾಪ್ತಿಯ ಕಪ್ಪಗಲು ರಸ್ತೆ, ಸಿದ್ದಾರ್ಥ ನಗರ ಕಾಲೋನಿ, ಹೌಸಿಂಗ್ ಬೋರ್ಡ್, ಬೀಚಿನಗರ, ಕೆ.ಇ.ಬಿ ಕ್ವಾಟಸ್ರ್ಸ್, ಭಗತ್‍ಸಿಂಗ್ ನಗರ, ಹೆಚ್.ಡಿ.ಎಫ್.ಸಿ ಬ್ಯಾಂಕ್, ಎಸಿ ಸ್ಟ್ರೀಟ್, ಬಾಲಾಜಿ ನರ್ಸಿಂಗ್ ಹೋಮ್, ಲಾ ಕಾಲೇಜು, ಮುಲ್ಲಂಗಿ ಲೇಔಟ್, ಕನಕದುರ್ಗ ಲೇಔಟ್.
ಎಫ್-6 ಫೀಡರ್ ವ್ಯಾಪ್ತಿಯ ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್‍ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್.ಪಿ.ಸರ್ಕಲ್, ಶಾಸ್ತ್ರೀ ನಗರ, ಬ್ಯಾಂಕ್ ಕಾಲೋನಿ, ಬಸವನಕುಂಟೆ, ಸಿರುಗುಪ್ಪ ರಸ್ತೆ, ರಾಮ ನಗರ, ಹವಂಬಾವಿ.
ಎಫ್-13 ಫೀಡರ್ ವ್ಯಾಪ್ತಿಯ ದೇವಿನಗರ, ಸಿರುಗುಪ್ಪ ರಸ್ತೆ, ಇಂದಿರಾ ನಗರ, ಸಂಜಯ ನಗರ, ಶಿವಲಿಂಗ ನಗರ, ಶಾಸ್ತ್ರೀನಗರ, ಬಸವನಕುಂಟೆ, ಎಂ.ಕೆ.ನಗರ, ಹವಂಭಾವಿ, ಅಶೋಕ ನಗರ, ಶ್ರೀನಿವಾಸ ನಗರ, ಕುರಿಹಟ್ಟಿ, ವೀರಣ್ಣಗೌಡ ನಗರ, ರಾಜೇಶ್ವರಿ ನಗರ, ಕೆ.ಎಂ.ಎಫ್, ಭುವನಗಿರಿ ಕಾಲೋನಿ, ಎಸ್.ಎಲ್.ವಿ ಕಾಲೋನಿ, ಶಿವಗಿರಿ ಕಾಲೋನಿ, ರಾಮನಗರ, ಶ್ರೀನಿವಾಸ ನಗರ, ಸೂರ್ಯ ಕಾಲೋನಿ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಜೀನ್ಸ್ ಉದ್ಯಮಕ್ಕೆ ನಿರಂತರ ವಿದ್ಯುತ್ ಪೂರೈಕೆ: ರವೀಂದ್ರ ಕರಿಲಿಂಗಣ್ಣನವರ್
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಅಕ್ಟೋಬರ್ ಮಾಹೆಯ ಕೆಲ ದಿನಗಳ ಕಾಲ ಆನ್‍ಶೆಡ್ಯೂಲ್ಡ್ ಲೋಡ್ ಶೆಡ್ಡಿಂಗ್ ಕಾರ್ಯ ಕೈಗೊಂಡಿದ್ದು, ಇದರ ಕುರಿತು ಗ್ರಾಹಕರಿಗೆ ಮನವರಿಕೆ ಮಾಡಿದ್ದಾರೆ. ನಿರಂತರ ವಿದ್ಯುತ್ ಪೂರೈಕೆ ಮಾಡಲು ಜೆಸ್ಕಾಂ ಕಂಪನಿಯು ಕ್ರಮಕೈಗೊಂಡಿದೆ ಹಾಗೂ ಮುಂದಿನ ದಿನಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಿಲಿಂಗಣ್ಣನವರ್ ಅವರು ತಿಳಿಸಿದರು.
ನಗರದ ಜೀನ್ಸ್ ಉದ್ಯಮಕ್ಕೆ ನಿರಂತರ ವಿದ್ಯುತ್ ಪೂರೈಕೆಗಾಗಿ ಅವರು ಖುದ್ದಾಗಿ ಜೀನ್ಸ್ ಅಪೆರಲ್ ಪಾರ್ಕ್‍ಗೆ ಭೇಟಿ ನೀಡಿ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಆಲಿಸಿದರು.
ಖುದ್ದಾಗಿ ಬೇಟಿ ನೀಡಿದ ವ್ಯವಸ್ಥಾಪಕ ನಿರ್ದೇಕರ ಕಾರ್ಯಕ್ಕೆ ಜೀನ್ಸ್ ಉದ್ಯಮಿಗಳ ಪರವಾಗಿ ಉಪಾಧ್ಯಕ್ಷ ಮಲ್ಲಿಕಾರ್ಜುನ ರವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜೆಸ್ಕಾಂ ಕಂಪನಿಯ ತಾಂತ್ರಿಕ ನಿರ್ದೇಶಕ ಆರ್.ಡಿ.ಚಂದ್ರಶೇಖರ್, ಬಳ್ಳಾರಿ ಗ್ರಾಮೀಣ ವಿಭಾಗೀಯ ಕಾರ್ಯನಿರ್ವಾಹಕ ಅಭಿಯಂತರರಾದ ಜೆ.ರಂಗನಾಥ ಬಾಬು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
--------
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ: ದಾಖಲೆಗಳ ವಿಲೇವಾರಿ, ಹಿಂಪಡೆದುಕೊಳ್ಳಲು ಡಿ.08ರವರೆಗೆ ಅವಕಾಶ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಗ್ರಾಹಕರ ವ್ಯಾಜ್ಯಗಳ ಕಾಯ್ದೆಯಡಿ 2011 ರಿಂದ 2015 ರವರೆಗಿನ ದಾಖಲಾಗಿ ಇತ್ಯರ್ಥವಾದ ಪ್ರಕರಣಗಳಲ್ಲಿ ಅವಧಿ ಮೀರಿದ ವ್ಯಾಜ್ಯಗಳ ಪ್ರಕರಣಗಳನ್ನು ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆದ್ದರಿಂದ ಕಕ್ಷಿದಾರರು, ವಕೀಲರು ತಮಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಈ ಅವಧಿಯಲ್ಲಿ ಸಲ್ಲಿಸಿರುವ ಮೂಲ, ಅವಶ್ಯಕ ಮತ್ತು ಇತರೆ ಆದೇಶಗಳ ದಾಖಲೆಗಳನ್ನು ಡಿಸೆಂಬರ್ 08 ರೊಳಗಾಗಿ ಈ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಮತ್ತು ಸಹಾಯಕ ಆತಳಿತಾಧಿಕಾರಿ ಆದಪ್ಪ ರಾಮಪ್ಪ ಜುಮ್ಮಾಲಪುರ ಅವರು ತಿಳಿಸಿದ್ದಾರೆ.
ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗೆ ತಾವು ಹಾಜರು ಪಡಿಸಿರುವ ಮೂಲ ದಾಖಲೆಗಳನ್ನು ಪಡೆದುಕೊಳ್ಳದಿದ್ದಲ್ಲಿ, ರಾಜ್ಯ ಗ್ರಾಹಕರ ಆಯೋಗದ ನಿರ್ದೇಶನದನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಶಿಕ್ಷಣದಲ್ಲಿ ಮಾನವೀಯತೆಯ ಮೌಲ್ಯ ಬೋಧಿಸುವ ಕೆಲಸವಾಗಲಿ: ಪಿಜಿಆರ್ ಸಿಂಧ್ಯ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ವಿಶ್ವವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳು, ಕೇವಲ ಶೈಕ್ಷಣಿಕ ವಿಷಯಗಳಿಗೆ ಸೀಮಿತವಾಗದೇ ಪ್ರತಿಯೊಂದು ವಿಷಯದಲ್ಲಿ ಜ್ಞಾನವನ್ನು ಶೋಧಿಸುವ ಮತ್ತು ಉತ್ತರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ಮಾನವೀಯತೆಯ ಮೌಲ್ಯಗಳನ್ನು ಬೋಧಿಸಿ, ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಭಾರತ ಸ್ಕೌಟ್ ಮತ್ತು ಗೈಡ್ಸ್‍ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರು ಹೇಳಿದರು.
ನಗರದ ಹೊರವಲಯದಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಭಾರತ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾಲಯದ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಕಾಲೇಜುಗಳ ಉಪನ್ಯಾಸಕ ಮತ್ತು ಉಪನ್ಯಾಸಕಿಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ರೋವರಿಂಗ್ ಮತ್ತು ರೇಂಜರಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸುಂದರ ಬದುಕು ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ ಮತ್ತು ಗೈಡ್ಸ್‍ನ ಶಿಸ್ತು ಹಾಗೂ ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಸ್ಕೌಟ್ಸ್ ಮತ್ತು ಗೈಡ್ಸ್‍ನಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ, ಸಂಸ್ಕøತಿಯ ಅರಿವನ್ನು ಮೂಡಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.
ವಿಎಸ್‍ಕೆ ವಿಶ್ವವಿದ್ಯಾಲಯದ ಕುಲಪತಿ ಪೆÇ್ರೀ.ಸಾಹೇಬ್ ಅಲಿ ಹೆಚ್ .ನಿರಗುಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕಿ ಹನುಮಕ್ಕ, ಕಲಬುರಗಿ ಗುಲ್ಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ.ಎಂ.ಎಸ್.ಪಾಸೋಡಿ, ಬೆಂಗಳೂರು ಕಾಲೇಜು ಶಿಕ್ಷಣ ಆಯುಕ್ತರ ಕಚೇರಿಯ ಸಮನ್ವಯ ಅಧಿಕಾರಿ ಡಾ.ಶ್ರೀಕಾಂತ ಆರ್, ಕುಲಸಚಿವ ರುದ್ರೇಶ್.ಎಸ್.ಎನ್., ಕುಲಸಚಿವ (ಮೌಲ್ಯಮಾಪನ) ಪೆÇ್ರೀ.ರಮೇಶ್ ಓ.ಓಲೇಕಾರ, ಹಣಕಾಸು ಅಧಿಕಾರಿ ಡಾ.ಸದ್ಯೋಜಾತಪ್ಪ, ವಿಶ್ವವಿದ್ಯಾಲಯದ ರೇಂಜರ್ ಅಂಡ್ ರೋವರ್‍ನ ಸಂಯೋಜಕ ಡಾ.ಶಶಿಧರ್ ಕೇಲೂರು ಮತ್ತು ಕಲ್ಯಾಣ ಕರ್ನಾಟಕ ವಿಭಾಗ ರೋವರ್ ಅಂಡ್ ರೇಂಜರ್ ಸಹಾಯಕ ರಾಜ್ಯ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜುಜಾರೆ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಇತರರು ಉಪಸ್ಥಿತರಿದ್ದರು.
-------
ಸೋಮವಾರ, ಅಕ್ಟೋಬರ್ 30, 2023
ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ನಿವಾಸಿ ಬಿ.ಎಂ.ಮನೋಜ್ ಕುಮಾರ್ ಎನ್ನುವ 32 ವರ್ಷದ ವ್ಯಕ್ತಿ ಅ.18ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೆÇಲೀಸ್ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ 5.6 ಅಡಿ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಬಿಳಿ ಮತ್ತು ಪಿಂಕ್ ಕಲರ್ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೆÇಲೀಸ್ ಠಾಣೆಯ ದೂ.08395-250100, ಮೊ.9480803062 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.
---------
ಅಸಂಘಟಿತ ಕಾರ್ಮಿಕರಿಂದ ಅಪಘಾತ ಪರಿಹಾರಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್‍ನಲ್ಲಿ ನೋಂದಣಿಯಾದ ಅಸಂಘಟಿತ ಕಾರ್ಮಿಕರು ಅಪಘಾತಗೊಂಡಿದ್ದಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಪಘಾತ ಪರಿಹಾರಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಸಂಘಟಿತ ಕಾರ್ಮಿಕರಾಗಿ ವಿವಿಧ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ ಸರ್ಕಾರದ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ 379 ವಿವಿಧ ವರ್ಗದ ಕಾರ್ಮಿಕರು 2021ರ ಆ.26ರಿಂದ 2022ರ ಮಾ.31ರವರೆಗೆ ನೋಂದಣಿಯಾಗಿರಬೇಕು. ಅಪಘಾತ ಅನುಭವಿಸಿರುವÀ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ರೂ.2 ಲಕ್ಷ ಪರಿಹಾರ ಒದಗಿಸಲಾಗುವುದು.
*ಅಗತ್ಯ ದಾಖಲೆಗಳು:*
ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್) ಸಂಖ್ಯೆ, ಮರಣ ಪ್ರಮಾಣ ಪತ್ರ, ಮರಣಕ್ಕೆ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್‍ಐಆರ್ ಅಥವಾ ಪಂಚನಾಮ ದಾಖಲೆ.
ಅಂಗವೈಕಲ್ಯ ಹೊಂದಿದ್ದಲ್ಲಿ ಫಲಾನುಭವಿಯ ಆಧಾರ್ ಸಂಖ್ಯೆ, ಯುಎಎನ್ ಕಾರ್ಡ್(ಇ-ಶ್ರಮ್ ಕಾರ್ಡ್) ಸಂಖ್ಯೆ, ಅಪಘಾತದಿಂದ ಉಂಟಾದ ಅಂಗವೈಕಲ್ಯವನ್ನು ಸೂಚಿಸುವ ಡಿಸ್ಚಾರ್ಜ್ ಸಾರಾಂಶವನ್ನು ಒಳಗೊಂಡಿರುವ ಆಸ್ಪತ್ರೆಯ ದಾಖಲೆಗಳೊಂದಿಗೆ ನಗರದ ಮಹಮ್ಮದಿಯ ಕಾಲೇಜ್ ಹಿಂಭಾಗ ಕೌಲ್‍ಬಜಾರ್ ನಲ್ಲಚೇರುವು ಉಪ ವಿಭಾಗ ಕಾರ್ಮಿಕ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಹಾಗೂ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕ ಕಚೇರಿ ಅಧಿಕಾರಿ ಮತ್ತು ದೂ.08392-254875 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಫ್ ಅಹಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ನ.01ರಂದು 68ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ಜಿಲ್ಲಾಡಳಿತದ ವತಿಯಿಂದ 68ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 01ರಂದು ಬೆಳಿಗ್ಗೆ 09 ಗಂಟೆಗೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸರ್ಕಾರಿ (ಮಾಪು) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.
ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಧ್ವಜರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ತದನಂತರ ರಾಜ್ಯೋತ್ಸವದ ಸಂದೇಶ ನೀಡುವರು.
ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ್, ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಡಿ.ತ್ರಿವೇಣಿ ಸೇರಿದಂತೆ ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಬಳ್ಳಾರಿ ವಲಯ ಪೆÇಲೀಸ್ ಮಹಾ ನೀರಿಕ್ಷಕ ಬಿ.ಎಸ್.ಲೋಕೇಶ್ ಕುಮಾರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್.ಎನ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
-------
67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಲಿಪಿಕಾ.ಡಿ.ಎಂ ಆಯ್ಕೆ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ನಗರದ ಕಾರ್ಕಲತೋಟದ ನಿವಾಸಿ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಲಿಪಿಕಾ.ಡಿ.ಎಂ ಎನ್ನುವ ಬಾಲಕಿ ದೆಹಲಿಯಲ್ಲಿ ನಡೆಯುವ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಸಾಲಿನ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಗಳು ದೆಹಲಿಯಲ್ಲಿ ನವೆಂಬರ್ ಮೂರನೇಯ ವಾರದಲ್ಲಿ ನಡೆಯಲಿದ್ದು, ಲಿಪಿಕಾ ಅವರು 50 ಮೀ ಫ್ರೀ ಸ್ಟೈಲ್ ಹಾಗೂ 50 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಳ್ಳಾರಿ ನಗರದ ಕಾರ್ಕಲತೋಟದ ನಿವಾಸಿಗಳಾದ ವಿರೇಶ್.ಡಿ.ಎಂ ಹಾಗೂ ಸುಶೀಲಾ.ಡಿ.ಎಂ ಇವರ ಪುತ್ರಿಯಾದ ಲಿಪಿಕಾ.ಡಿ.ಎಂ ಅವರು, ನಗರದ ಪೊಲೀಸ್ ಕವಾಯತು ಮೈದಾನ ಎದುರಿನ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಎರ್ರಿಸ್ವಾಮಿ ಮತ್ತು ರಜನಿ ಲಕ್ಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಲಿಪಿಕಾ ಅವರು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ 40 ಚಿನ್ನದ ಪದಕ, 15 ಬೆಳ್ಳಿ ಪದಕ ಹಾಗೂ 15 ಕಂಚು ಪದಕ ಸೇರಿ 70ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ.
ದೆಹಲಿಯಲ್ಲಿ ನಡೆಯುವ 67ನೇ ರಾಷ್ಟ್ರೀಯ ಶಾಲಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿ, ಈಜು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಲಿಪಿಕಾ.ಡಿ.ಎಂ ಅವರಿಗೆ ಜಿಲ್ಲಾಡಳಿತದವತಿಯಿಂದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಸಹಾಯಕ ಆಯುಕ್ತ ಹೇಮಂತ್.ಎನ್ ಅವರು ಶುಭ ಹಾರೈಸಿದ್ದಾರೆ.
-------
ಅಪರಿಚಿತ ಮೃತ ಗಂಡಸಿನ ಶವ ಪತ್ತೆ: ವಾರಸುದಾರರ ಪತ್ತೆಗಾಗಿ ಮನವಿ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ನಗರದ ಕೌಲ್‍ಬಜಾರ್‍ನ ವೀರಶೈವ ಕಾಲೇಜಿಗೆ ಹೋಗುವ ರಸ್ತೆಯ ನೀರಾವರಿ ಇಲಾಖೆ ಕಚೇರಿ ಮುಂದೆ ಸುಮಾರು 70 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಅಸ್ವಸ್ಥನಾಗಿ, ಎರಡು ಮೂರು ದಿನಗಳಿಂದ ಪ್ರಜ್ಞಾಹೀನನಾಗಿದ್ದುದರಿಂದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮೃತಪಟ್ಟಿರುತಾನೆ ಎಂದು ವೈದ್ಯರು ತಿಳಿಸಿರುತ್ತಾರೆ. ಮೃತನ ವಾರಸುದಾರರು ಪತ್ತೆಯಾಗಿರುವುದಿಲ್ಲ.
ಚಹರೆ ಗುರುತು: ಎತ್ತರ ಸುಮಾರ 5 ಅಡಿ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು ಹೊಂದಿರುತ್ತಾನೆ. ಬಿಳಿ ಬಣ್ಣದ ಜುಬ್ಬ, ವಿವಿಧ ಬಣ್ಣದ ಡಿಜೈನ್ ಇರುವ ಲುಂಗಿ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731, ಪಿ.ಐ. ಮೊ.9480803047, ಪಿಎಸ್‍ಐ ಮೊ.9480803084 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಕೌಲ್‍ಬಜಾರ್ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ದೈಹಿಕ, ಮಾನಸಿಕ ಪೆÇೀಷಕಾಂಶ ಅಯೋಡಿನ್: ಡಾ.ಮರಿಯಂಬಿ ವಿ.ಕೆ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ಅಯೋಡಿನ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ ಪೋಷಕಾಂಶವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ, ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಅಯೋಡಿನ್ ಯುಕ್ತ ಉಪ್ಪು ನಿಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯದ ಸಂರಕ್ಷಕ” ಎಂಬ ಧ್ಯೇಯವಾಕ್ಯದೊಂದಿಗೆ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಅಂಗಾಂಗಗಳ ಕುಂಠಿತ ಬೆಳವಣಿಗೆ ಹಾಗೂ ಇತರೆ ಸಮಸ್ಯೆಗಳು ಉಂಟಾಗುತ್ತವೆ. ವಯಸ್ಕರಲ್ಲಿ ಅಯೋಡಿನ್ ಕೊರತೆ ಉಂಟಾದರೆ ನಿಶ್ಯಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ ಕಾಣಬಹುದು. ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಉಂಟಾದರೆ ಪದೇ ಪದೇ ಗರ್ಭಪಾತವಾಗುವುದು, ಸಂತಾನೋತ್ಪತ್ತಿಯ ತೊಂದರೆ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ಎಂದು ತಿಳಿಸಿಕೊಟ್ಟರು.
ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದು. ಸಾಮಾನ್ಯವಾಗಿ ವಯಸ್ಕರಿಗೆ ಒಂದು ದಿನಕ್ಕೆ 150 ಮೈಕ್ರೋ ಗ್ರಾಂ, ಗರ್ಭಿಣಿ, ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, 11 ತಿಂಗಳವರೆಗಿನ ಮಗುವಿಗೆ 50 ಮೈಕ್ರೋ ಗ್ರಾಂ, 1 ವರ್ಷದಿಂದ 5 ವರ್ಷದವರೆಗಿನ ಮಕ್ಕಳಿಗೆ 90 ಮೈಕ್ರೋ ಗ್ರಾಂ ಹಾಗೂ 5 ರಿಂದ 16 ವಯಸ್ಸಿನ ಮಕ್ಕಳಿಗೆ 120 ಮೈಕ್ರೋ ಗ್ರಾಂ. ಅಯೋಡಿನ್ ಅಗತ್ಯವಿದೆ ಎಂದು ತಿಳಿಸಿದರು.
ಆಹಾರ ಪದಾರ್ಥಗಳಾದ ಹಾಲು, ಮೊಟ್ಟೆ, ಕ್ಯಾರೆಟ್, ಹಸಿರು ತರಕಾರಿಗಳು, ಸೀಗಡಿ, ಮೀನು, ಹಣ್ಣುಗಳು, ಅಯೋಡಿನ್‍ಯುಕ್ತ ಉಪ್ಪು ಇವುಗಳನ್ನು ತಪ್ಪದೇ ಸೇವಿಸಿ ಅಯೋಡಿನ್ ಅಂಶವನ್ನು ಪಡೆಯಬೇಕು ಹಾಗೂ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
ಆರೋಗ್ಯ ಇಲಾಖೆಯ ತಂಡ ಮನೆ ಮನೆಗೆ ಭೇಟಿ ನೀಡಿ ಉಪ್ಪಿನ ಮಾದರಿಯನ್ನು ಸಂಗ್ರಹಿಸಿ ಅಯೋಡಿನ್ ಪ್ರಮಾಣವನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಯೋಡಿನ್‍ಯುಕ್ತ ಉಪ್ಪನ್ನು ಮಿತವಾಗಿ ಬಳಸಬೇಕು. ಹೆಚ್ಚಾದರೆ ಹಾಗೂ ಕಡಿಮೆಯಾದರೆ ನ್ಯೂನ್ಯತೆ ಉಂಟಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಿನಲ್ಲಿ ಇರುವ ಅಯೋಡಿನ್ ಪ್ರಮಾಣ ಪರೀಕ್ಷೆಯ ಪ್ರಾತ್ಯಕ್ಷತೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ಈ ಸಂದರ್ಭದಲ್ಲಿ ಗಾಂಧಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ.ಪ್ರಿಯಾಂಕ, ಜಿಲ್ಲಾ ಮೈಕ್ರೋಬಯಲಾಜಿಸ್ಟ್ ಡಾ.ಶರತ್‍ಬಾಬು, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
-------
ಶನಿವಾರ, ಅಕ್ಟೋಬರ್ 28, 2023
ಆರ್.ಎನ್.ಶಿವರಾಜ್ ಅವರಿಗೆ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಂಸೆಯ ಪ್ರಶಸ್ತಿ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ರಾವಿಹಾಳ್ ಗ್ರಾಮದ ಆರ್.ಎನ್.ಶಿವರಾಜ್ ಅವರಿಗೆ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಂಸೆಯ ಪ್ರಶಸ್ತಿ ಲಭಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ, ಜಿಲ್ಲಾಡಳಿತವು ಮಹರ್ಷಿ ವಾಲ್ಮೀಕಿ ಜಯಂತಿಯಂದು ನೀಡುವ ಪ್ರಶಂಸೆಯ ಪ್ರಶಸ್ತಿಗೆ ಆರ್.ಎನ್.ಶಿವರಾಜ್ ಅವರು ಭಾಜನರಾಗಿದ್ದಾರೆ.
ಇವರು, ಕೋವಿಡ್ ಅವಧಿಯಲ್ಲಿ ಜಿಲ್ಲಾಡಳಿತದ ಅಧೀನದಲ್ಲಿ ಕೋರೋನಾ ಸೈನಿಕನಾಗಿ, ಸೋಂಕಿತರ ಹಾರೈಕೆ ಮಾಡುವ ಮೂಲಕ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಇವರ ಅಗಾಧ ಸಮಾಜ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತವು, ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶಿವರಾಜ ಅವರನ್ನು ಸನ್ಮಾನಿಸಲಾಯಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.
------
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಆಹ್ವಾನ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಲಾಗಿದೆ.
*ಅರ್ಹತೆಗಳು:*
ಸಿ.ಇ.ಟಿ./ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿ ನಲ್ಲಿ ವ್ಯಾಸಂಗ ಮಾಡುವ ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1 ಲಕ್ಷ ಸಾಲವನ್ನು ಶೇ.2 ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ನೀಡಲಾಗುವುದು. ವ್ಯಾಸಂಗ ಪೂರ್ಣಗೊಂಡ ನಂತರ 04 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು ಹಾಗೂ 35 ವರ್ಷದ ಒಳಗಿನವರಾಗಿರಬೇಕು, ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಮಿತಿಯೊಳಗಿರಬೇಕು.
*ಸಾಮಾನ್ಯ ಅರ್ಹತೆಗಳು:*
ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿರಬೇಕು, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು (ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು), ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಹಾಗೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು, ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಳಿಗೆ ಶೇ.5 ಮೀಸಲಾತಿ ಇರಿಸಿದೆ, ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಕಚೇರಿ ದೂ.08392-267038, ಮೊ.9448451111 ಹಾಗೂ ಅಧಿಸೂಚನೆ ಮತ್ತು ವಿವರಗಾಗಿ ವೆಬ್‍ಸೈಟ್ www.kacdc.karnataka.gov.in ಗೆ ಭೇಟಿ ನೀಡಬಹುದು ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ಭೀಮಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಮಂಜೂರಾದ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಪುನಃ ಸಾಲ ಪಡೆಯಲು ಅರ್ಹರು: ದೀಪ ಶ್ರೀ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಫಲಾನುಭವಿಗಳು ಪಡೆದ ಸಾಲವನ್ನು ಮರುಪಾವತಿಸಿದಲ್ಲಿ ಮಾತ್ರ ಪುನಃ ನವೀಕರಣ ಸಾಲ ಪಡೆಯಲು ಅರ್ಹರಾಗಿರುತ್ತಾರೆ ಎಂದು ನಿಗಮ ವ್ಯವಸ್ಥಾಪಕ ನಿರ್ದೇಶಕಿ ದೀಪ ಶ್ರೀ.ಕೆ ಅವರು ಹೇಳಿದ್ದಾರೆ.
ಅವರು, ಜಿಲ್ಲೆಯ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಯೋಜನೆಗಳಡಿ ಸಾಲ-ಸೌಲಭ್ಯ ಪಡೆದಂತಹ ಫಲಾನುಭವಿಗಳ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿ, ಫಲಾನುಭವಿಗಳ ಕುಂದುಕೊರತೆಗಳನ್ನು ಆಲಿಸಿ, 2019-20 ಮತ್ತು 2020-21 ರ ಫಲಾನುಭವಿಗಳು ಮಂಜೂರಾದ ಸಾಲವನ್ನು 34 ಕಂತುಗಳೊಗಾಗಿ ಮರುಪಾವತಿಸಿದ್ದಲ್ಲಿ ಮಾತ್ರ ಪುನಃ ಸಾಲವನ್ನು ಪಡೆಯಲು ಆರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಮಂಜೂರಾದ ಸಾಲವನ್ನು ಆನ್‍ಲೈನ್ ಮೂಲಕ ಮರುಪಾವತಿ ಮಾಡಬೇಕು. 2023-24ನೇ ಸಾಲಿಗೆ ನೂತನ ಯೋಜನೆಗಳಾದ ಸ್ವಯಂ ಉದ್ಯೋಗ, ಆಹಾರ ವಾಹಿನಿ, ವಾಸವಿ ಜಲಶಕ್ತಿ, ಅರಿವು ಶೈಕ್ಷಣಿಕ ಸಾಲದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
------
ಸಿಂಥೆಟಿಕ್ ಬ್ಯಾಂಡ್ಮಿಟನ್ ಕೋರ್ಟ್ ಉದ್ಘಾಟನೆ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ ಮತ್ತು ನಿರ್ಮಿತಿ ಕೇಂದ್ರದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಸ್ಪಂದನ ಕೇಂದ್ರದ ಪಕ್ಕದಲ್ಲಿ ನವೀಕರಣಗೊಳಿಸಿದ, ಸಿಂಥೆಟಿಕ್ ಬ್ಯಾಂಡ್ಮಿಟನ್ ಮೈದಾನವನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೋಹನ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ಮೈದಾನ ವೀಕ್ಷಣೆ ನಡೆಸಿ, ಆಟ ಸವಿದರು.
-------
50 ವರ್ಷಗಳ ಕರ್ನಾಟಕ ರಾಜ್ಯೋತ್ಸವ ಸಂಭ್ರಮ; ಆದ್ದೂರಿ ಆಚರಣೆಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆದ್ದೂರಿಯಾಗಿ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕರೆ ನೀಡಿದ್ದಾರೆ.
ನವೆಂಬರ್ 1 ರಂದು ಜಿಲ್ಲೆಯ ಎಲ್ಲಾ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಕ್ಯ ಬರೆಯಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಅಂದು ಬೆಳಿಗ್ಗೆ 9 ಗಂಟೆಗೆ ಆಕಾಶವಾಣಿ ಕೇಂದ್ರಗಳಲ್ಲಿ (ರೇಡಿಯೋ) ನಾಡ ಗೀತೆಯನ್ನು ಪ್ರಸಾರ ಮಾಡಲಾಗುವುದು. ಆ ಸಮಯದಲ್ಲಿ ಕನ್ನಡ ನಾಡಿನ ಸಮಸ್ತ ನಾಗರಿಕರು ಎದ್ದು ನಿಂತು ರಾಷ್ಟ್ರ ಗೀತೆಗೆ ಗೌರವ ಸಲ್ಲಿಸುವ ರೀತಿಯಲ್ಲಿ ನಾಡ ಗೀತೆಗೂ ಗೌರವ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ನಂತರ ಸಂಜೆ 5 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮೈದಾನಗಳಲ್ಲಿ ಕೆಂಪು ಗಾಳಿಪಟ ಉತ್ಸವ ಆಚರಿಸಬೇಕು. ಬಳಿಕ ಸಂಜೆ 7 ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಗಳ ಮುಂದೆ, ಕಚೇರಿಗಳ ಮುಂದೆ ಹಾಗೂ ಅಂಗಡಿ-ಮಳಿಗೆಗಳ ಮುಂದೆ ಹಣತೆ (ದೀಪ) ಹಚ್ಚುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಬೇಕು ಎಂದು ಹೇಳಿದ್ದಾರೆ.
ಮೇಲ್ಕಂಡ ಎಲ್ಲಾ ಅಂಶಗಳನ್ನು ಚಾಚು ತಪ್ಪದೇ ಸೂಕ್ತ ಕ್ರಮ ವಹಿಸಲು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ರಮವಹಿಸಿ, ಸಂಘ-ಸಂಸ್ಥೆಗಳು, ಎಲ್ಲಾ ನಾಗರಿಕರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಬಳ್ಳಾರಿಯಲ್ಲಿ ಸಂಭ್ರಮದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಮಾನವಿಯತೆ ಧರ್ಮ ಪ್ರತಿಪಾದಿಸಿದ ಮಹರ್ಷಿ ವಾಲ್ಮೀಕಿ: ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ,ಅ.28(ಕರ್ನಾಟಕ ವಾರ್ತೆ):
ಮಾನವಿಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರತ್ನಕರ ಎಂಬ ವ್ಯಕ್ತಿ ತನ್ನ ಶಕ್ತಿಯಿಂದ ಮಹರ್ಷಿ ವಾಲ್ಮೀಕಿ ಆದರು. ಅವರು, ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು.
24,000 ಕಾವ್ಯಗಳನ್ನು ರಚಿಸುವ ಮೂಲಕ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವಿಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.
ಮಾನವ ಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಸರ್ಕಾರದಿಂದ ಹಲವಾರು ಯೋಜನೆಗಳಡಿ ಸಾಲ-ಸೌಲಭ್ಯ ಒದಗಿಸಲಾಗುತ್ತಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.
ಭಾರತೀಯ ವಾಲ್ಮೀಕಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕುಷ್ಟಗಿಯ ಉಪನ್ಯಾಸಕರಾದ ರಂಗನಾಥ ಕುರ್ರಪ್ಪ ಸುಬೇದಾರ ಅವರು ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರೆಲ್ಲರೂ ಸೇರಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಇದಕ್ಕೂ ಮುನ್ನ ನಲ್ಲಚೆರುವು ಪ್ರದೇಶದ ವಾಲ್ಮೀಕಿ ಭವನದ ಆವರಣದ ಮುಂಭಾಗದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಕೆ.ಶಂಕಿನದಾಸ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹೆಚ್.ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಾಲಿಕೆ ಸದಸ್ಯರು, ಎಲ್ಲಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
*ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ:*
*ಎಸ್‍ಎಸ್‍ಎಲ್‍ಸಿ ವಿಭಾಗ:*
ಅತಿಹೆಚ್ಚು ಅಂಕ ಪಡೆದ (625/620) ವಿದ್ಯಾರ್ಥಿ ಓಬಳೇಶ ಅವರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ರೂ.1 ಲಕ್ಷ ಮೊತ್ತದ ಚೆಕ್, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇನ್ನುಳಿದ ಕರಿಬಸಮ್ಮ.ಬಿ.ಇ., ವೆಂಕಟೇಶ.ಪಿ., ಪಲ್ಲವಿ.ವಿ., ಟಿ.ಪಿ.ಭಾಗ್ಯಶ್ರೀ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
*ಪಿಯುಸಿ ವಿಭಾಗ:*
ವೈ.ಮಣಿಕಂಠ, ಸಾಯಿ ಸಂಕೇತ, ಬಿ.ಉಮೇಶ, ಹರೀಶ್.ಎ., ಅಂಧ್ಯಾಳ್ ಯಶೋಧ.
*ಪಿಹೆಚ್‍ಡಿ ಪದವಿ ವಿದ್ಯಾರ್ಥಿಗಳು:*
ಡಾ.ಶರಣಗೌಡ, ಡಾ.ಪಾಂಡುರಂಗ, ಡಾ.ಮೌನೇಶ್.ಕೆ.
*ಕೃಷಿ ಕ್ಷೇತ್ರ:*
ಧರ್ಮಣ್ಣ, ರಾಮಕೃಷ್ಣ, ಮಲಿಯಕ್ಕ.
*ತೋಟಗಾರಿಕೆ ಕ್ಷೇತ್ರ:*
ಶೇಖರ್.
*ಕಲಾ ಮತ್ತು ಸಮಾಜ ಸೇವೆ:*
ಪಾಮಣ್ಣ ಮೀನಹಳ್ಳಿ, ಯರ್ರಮ್ಮ, ಚೆಲುವಾದಿ ಬಸವರಾಜ, ಆರ್.ಎನ್.ಶಿವರಾಜ.
*ಗಮನ ಸೆಳೆದ ಅದ್ದೂರಿ ಮೆರವಣಿಗೆ, ಕಲಾತಂಡ:*
ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕøತಿಕ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆಯು ಗಮನ ಸೆಳೆಯಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪುಷ್ಪನಮನ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ರಾಯಲ್ ವೃತ್ತದ ಮೂಲಕ ಬ್ರೂಸ್‍ಪೇಟೆ ಪೊಲೀಸ್ ರಾಣೆ ಮಾರ್ಗವಾಗಿ ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಕೌಲ್‍ಬಜಾರ್ ಮೊದಲನೇ ರೈಲ್ವೇ ಗೇಟ್‍ನಿಂದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನಕ್ಕೆ ತಲುಪಿತು.
---------
ಶುಕ್ರವಾರ, ಅಕ್ಟೋಬರ್ 27, 2023
ಬಳ್ಳಾರಿ ಜಿಲ್ಲೆ: ಅಂಗಾಂಗ ನೋಂದಣಿಯಲ್ಲಿ ಮೊದಲ ಸ್ಥಾನ
ಬಳ್ಳಾರಿ,ಅ.27(ಕರ್ನಾಟಕ ವಾರ್ತೆ):
ಸೆಪ್ಟೆಂಬರ್ 17 ರಿಂದ ಆರಂಭವಾದ ಆಯುಷ್ಮಾನ್ ಭವಃ ವಿಶೇಷ ಆರೋಗ್ಯ ಮೇಳಗಳ ಸಮ್ಮಿಳನದೊಂದಿಗೆ ಅಂಗಾಂಗ ದಾನವನ್ನು ನೋಂದಣಿ ಮಾಡಿಸುವ ಪ್ರಕ್ರಿಯೆ ಆರಂಭಗೊಂಡ ನಂತರ ಬಳ್ಳಾರಿ ಜಿಲ್ಲೆ ರಾಜ್ಯಮಟ್ಟದ ನೋಂದಣಿಯಲ್ಲಿ ಮೊದಲ ಸ್ಥಾನದಲ್ಲಿದೆ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ತಿಳಿಸಿದರು.
ಮುಖ್ಯವಾಗಿ ನಮ್ಮ ಮರಣಾ ನಂತರ ನೇತ್ರದಾನವನ್ನು ಮಾಡಲು ಅವಕಾಶವಿದ್ದು ಸಾಮಾನ್ಯವಾಗಿ ಕಣ್ಣಿನ ಕಾರ್ನಿಯಾ ಭಾಗವನ್ನು ಕುಟುಂಬದ ಸದಸ್ಯರು ನೀಡುವ ಮಾಹಿತಿ ಮತ್ತು ಒಪ್ಪಿಗೆ ಮೇರೆಗೆ ಮರಣ ಹೊಂದಿದ 06 ಗಂಟೆಯ ಒಳಗೆ ಸ್ವೀಕರಿಸಲಾಗುವುದು. ಆಕಸ್ಮಿಕವಾಗಿ ಮೆದುಳು ನಿಷ್ಕ್ರಿಯಗೊಂಡಲ್ಲಿ ಈ ಕುರಿತು ವೈದ್ಯಕೀಯ ತಂಡವು ಅಧೀಕೃತವಾಗಿ ಘೋಷಿಸಿದಲ್ಲಿ ಕುಟುಂಬದ ಸದಸ್ಯರು ನೀಡುವ ಮಾಹಿತಿ ಮತ್ತು ಒಪ್ಪಿಗೆ ಮೇರೆಗೆ ಆಸ್ಪತ್ರೆಯಲ್ಲಿಯೇ ದೇಹದ ಅಂಗಾಂಗಗಳಾದ ಹೃದಯ, ಕಿಡ್ನಿ, ಲಿವರ್, ಶ್ವಾಸಕೋಶ, ಸಣ್ಣ ಕರುಳು, ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಬಹುದಾಗಿದೆ ಎಂದರು.
ಪ್ರತಿ ದಿನ ಸಾವಿರಾರು ಜನ ಅಂಗಾಂಗಳ ಬೇಡಿಕೆಗಾಗಿ ನೋಂದಣಿ ಮಾಡಿಸುತ್ತಿದ್ದು ನೋಂದಣಿ ಮಾಡಿದುವ ಮೂಲಕ ಮತ್ತೊಬ್ಬರ ಜೀವನಕ್ಕೆ ಬೆಳಕಾಗಲು ದೇವರು ನೀಡಿದ ಅಪರೂಪದ ಅವಕಾಶದಿಂದ ಜೀವರಕ್ಷಕರಾಗಬಹುದು. ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆರೋಗ್ಯ ಹಾಗೂ ಆಶಾ ಕಸರ್ಯಕರ್ತೆಯರು ಸಂಘ- ಸಂಸ್ಥೆಗಳ ಮುಲಕ ಜಾಗೃತಿ ನೀಡಿ ನೋಂದಣಿ ಮಾಡಿಸುತ್ತಿದ್ದು ಇದರ ಜೊತೆಗೆ ದಾನದ ನೋಂದಣಿ ಮಾಡಲು NOTTO ಲಿಂಕ್ ಮೂಲಕ ಸ್ವಯಂ ತಮ್ಮ ಆಂಡ್ರ್ಯಾಯ್ಡ್ ಮೊಬೈಲ್ ನಲ್ಲಿ ಅಥವಾ ಕ್ಯೂ ಆರ್ ಕೋಡ್ ಮೂಲಕ ನೋಂದಣಿ ಮಾಡಿಸಲು ಅವಕಾಶವಿದ್ದು ಜೀವ ಸಾರ್ಥಕತೆಗಾಗಿ ನಮ್ಮ ಮರಣ ನಂತರ ಇನ್ನೊಬ್ಬರ ಜೀವನಕ್ಕೆ ಬೆಳಕಾಗಲು ಈ ಅಪೂರ್ವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ಮೋಕಾದಲ್ಲಿ ಜರುಗಿದ ಜನತಾ ದರ್ಶನದ ಸಂದರ್ಭದಲ್ಲಿ ಮೋಕಾ ಸೇರಿದಂತೆ ಜಿಲ್ಲೆಯಾದ್ಯಂತ 93 ಜನರ ನೋಂದಣಿ ಮಾಡಿಸುವ ಮಾಡಿಸಿ ಒಟ್ಟು 856 ಜನರ ನೋಂದಣಿಯೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ, ಪೆÇೀಲಿಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು, ಜಿಲ್ಲಾ ಪಂಚಯತ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ಜನತಾ ದರ್ಶನದಲ್ಲಿ ನೋಂದಣಿ ಪ್ರಮಾಣ ಪತ್ರ ವಿತರಿಸಿದರು.
------
ಸಂಜೀವಿನಿ ಸ್ತ್ರೀ ಶಕ್ತಿ ಮಿನಿ ಸೂಪರ್ ಮಾರ್ಕೆಟ್ ಉದ್ಘಾಟನೆ ಗ್ರಾಮೀಣ ಬಡ ಮಹಿಳೆಯರಿಗೆ ಜೀವನೋಪಾಯ ರೂಪಿಸುವಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಒಂದು ಪ್ರಯತ್ನ
ಬಳ್ಳಾರಿ,ಅ.27(ಕರ್ನಾಟಕ ವಾರ್ತೆ):
ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಮೂಲಕ ರೂಪಿಸಿರುವ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಹೊರಹೊಮ್ಮುತ್ತಿರುವುದು ಬೆಳಕಿಗೆ ಬಂದಿರುತ್ತದೆ.
ಈಗಾಗಲೇ ರಚಿಸಿರುವ 100 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಸುಮಾರು 6440 ಮಹಿಳಾ ಗುಂಪುಗಳನ್ನು ರಚಿಸಿ, ಸುಮಾರು 2093 ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿಯನ್ನು ಸ್ವ-ಸಹಾಯ ಗುಂಪುಗಳಿಗೆ ಸಾಲದ ರೂಪದಲ್ಲಿ ವಿತರಿಸಿ ವಿವಿಧ ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಯೋಜನೆಯ ಮೂಲಕ ಪ್ರಯತ್ನಿಸುತ್ತಿದೆ.
ಬಳ್ಳಾರಿ ಜಿಲ್ಲಾ ಹಂತದಲ್ಲಿ ಆಯ್ದ ಸ್ವ ಸಹಾಯ ಗುಂಪು/ಗ್ರಾ.ಪಂ ಮಟ್ಟದ ಒಕ್ಕೂಟದ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅದರಂತೆ ಬಳ್ಳಾರಿ ನಗರದ ಎಸ್.ಪಿ ವೃತ್ತದ ಬಳಿ ಖಾಲಿ ಇರುವ ತಾಲ್ಲೂಕು ಪಂಚಾಯಿತಿ ಮಳಿಗೆಯಲ್ಲಿ ಬಳ್ಳಾರಿ ತಾಲ್ಲೂಕು ಸಂಗನಕಲ್ಲು ಗ್ರಾಮ ಪಂಚಾಯತ್‍ನ ಅರುಣೋದಯ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿ ನೊಂದಾಯಿಸಿಕೊಂಡಿರುವ ದೇವಿಕಾ ಸ್ವ-ಸಹಾಯ ಗುಂಪಿನ ಸದಸ್ಯರ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ.
ಶುಕ್ರವಾರದಂದು, ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ ತ್ರಿಲೋಕ ಚಂದ್ರ ಅವರು ಮಳಿಗೆಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್, ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಮಡಗಿನ ಬಸಪ್ಪ, ಸಂಡೂರು ತಾಪಂ ಕಾರ್ಯನಿರ್ವಾಹಕ ಷಡಕ್ಷರಯ್ಯ ಸೇರಿದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಇತರರು ಉಪಸ್ಥಿತರಿದ್ದರು.
ಸುಮಾರು 60 ಮಹಿಳಾ ಉದ್ದಿಮೆಗಳಿಂದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗಣ್ಯರು ಉದ್ಘಾಟನೆ ನೆರವೇರಿಸಿ ಆಶಯನುದಡಿಯೊಂದಿಗೆ ಮಹಿಳಾ ಕಿರು ಉದ್ದಿಮೆದಾರರೊಂದಿಗೆ ಚರ್ಚಿಸಿ ಶುಭ ಆರೈಸಿದರು.
---------
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭ; ಆಕ್ಷೇಪಣೆ ಸಲ್ಲಿಸಲು ಅವಕಾಶ: ಡಾ.ತ್ರಿಲೋಕ ಚಂದ್ರ
ಬಳ್ಳಾರಿ,ಅ.27(ಕರ್ನಾಟಕ ವಾರ್ತೆ):
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಇಂದು (ಅ.27ರಂದು) ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿಯ ಕುರಿತು ಮತದಾರರಲ್ಲಿ ಯಾವುದಾದರೂ ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದು ಎಂದು ಮತದಾರರ ಪಟ್ಟಿ ಪರಿವೀಕ್ಷಕರೂ ಆಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರು ಹೇಳಿದರು.
ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕರಣೆ 01-01-2024ರ ಕುರಿತಂತೆ ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜಿಲ್ಲೆಯಲ್ಲಿನ ಎಲ್ಲಾ ಮತದಾರರ ನೊಂದಣಾಧಿಕಾರಿಗಳು, ಸಹಾಯಕ ಮತದಾರರ ನೊಂದಣಾಧಿಕಾರಿಗಳೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಅಕ್ಟೊಬರ್ 27, 2023 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಕರಡು ಮತದಾರರ ಯಾದಿಯಲ್ಲಿ ಹೆಸರು ಇರುವ ಬಗ್ಗೆ ಮತ್ತು ಹೆಸರು ತಪ್ಪಾಗಿ ನಮೂದಾಗಿದ್ದರೆ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗಾಗಿ (ನಮೂನೆ-6), ಹೆಸರು ತೆಗೆದು ಹಾಕಲು (ನಮೂನೆ-7), ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿಗಾಗಿ (ನಮೂನೆ-8) ಹಾಗೂ ವಿಧಾನಸಭಾ ಮತಕ್ಷೇತ್ರದಲ್ಲಿನ ವಿಳಾಸ ತಿದ್ದುಪಡಿ, ಬದಲಾವಣೆಗಾಗಿ (ನಮೂನೆ-8ಎ) ಅರ್ಜಿಗಳನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಇಂದಿನಿಂದ (ಅ.27 ರಿಂದ) ಡಿಸೆಂಬರ್ 09 ರೊಳಗಾಗಿ ಜಿಲ್ಲೆಯಲ್ಲಿನ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿಗೆ ಕೆಲಸದ ಸಮಯದಲ್ಲಿ ನಿಗಧಿತ ನಮೂನೆಗಳಲ್ಲಿ (Form-06, Form-07, Form-08) ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಬಿಎಲ್‍ಎ (Booth Level Agent)) ಗಳನ್ನು ತಮ್ಮ ತಮ್ಮ ಪಕ್ಷಗಳಿಂದ ಆಯ್ಕೆ ಮಾಡಿ ನಿಗಧಿತ ನಮೂನೆಗಳಲ್ಲಿ ಭರ್ತಿ ಮಾಡಿ 07 ದಿನಗಳೊಳಗಾಗಿ ವಿಧಾನಸಭಾ ಕ್ಷೇತ್ರವಾರು ಆಯಾ ಮತದಾರ ನೊಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದರು.
*ಪ್ರಸ್ತಾವಿತ ಕರಡು ಪಟ್ಟಿಯ ಪ್ರಕಾರ ಮತದಾರರು ನೊಂದಣಿಯಾದ ಸಂಖ್ಯೆ ವಿವರ:*
91- ಕಂಪ್ಲಿ ವಿಧಾನಸಭಾ ಕ್ಷೇತ್ರ:
ಪುರುಷರು - 107773, ಮಹಿಳೆಯರು - 109648, ಒಟ್ಟು 217421.
92 - ಸಿರುಗುಪ್ಪ ವಿಧಾನಸಭಾ ಕ್ಷೇತ್ರ:
ಪುರುಷರು - 107622, ಮಹಿಳೆಯರು - 111582, ಒಟ್ಟು 219204.
93 - ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ಪುರುಷರು - 117504, ಮಹಿಳೆಯರು - 123963, ಒಟ್ಟು 241467.
94 - ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:
ಪುರುಷರು - 127889, ಮಹಿಳೆಯರು - 135390, ಒಟ್ಟು 263279.
95 - ಸಂಡೂರು ವಿಧಾನಸಭಾ ಕ್ಷೇತ್ರ:
ಪುರುಷರು - 113141, ಮಹಿಳೆಯರು - 112983, ಒಟ್ಟು 226124.
ಜಿಲ್ಲೆಯಲ್ಲಿ ಒಟ್ಟು ಪುರುಷರು - 573929, ಮಹಿಳೆಯರು - 593566, ಒಟ್ಟು 1167495.
ಸ್ವೀಕೃತಗೊಂಡ ಹಕ್ಕು ಮತ್ತು ತಕರಾರುಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಡಿಸೆಂಬರ್ 26, 2023ರ ಒಳಗಾಗಿ ಇತ್ಯರ್ಥಪಡಿಸುವುದು. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜನವರಿ 05, 2024 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಸಹಾಯಕ ಮತದಾರ ನೋಂದಣಾಧಿಕಾರಿಗಳು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.
-------
ಬ್ರಿಟಿಷರ ವಿರುದ್ಧ ದಂಗೆ ಎದ್ದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮ: ಮೇಯರ್ ಡಿ.ತ್ರಿವೇಣಿ
ಬಳ್ಳಾರಿ,ಅ.27(ಕರ್ನಾಟಕ ವಾರ್ತೆ):
ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಯನ್ನು ಮುನ್ನಡೆಸಿದ ಮೊದಲ ಭಾರತೀಯರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಅವರು ಒಬ್ಬರು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೆನ್ನಮ್ಮ ಅವರು, 23 ಅಕ್ಟೋಬರ್ 1778 ರಂದು ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಏಳುವಂತೆ ಮಾಡಿ, ಅನೇಕ ಮಹಿಳೆಯರಲ್ಲಿ ಧೈರ್ಯ ತುಂಬಿದ ವೀರ ಮಹಿಳೆಯೂ ಆದ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು ಎಂದೇ ಗೌರವಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ಅವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತ್ಯೋತ್ಸವದ ವಿಶೇಷ ಉಪನ್ಯಾಸದಲ್ಲಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮಾಜಿಯವರು ತಮ್ಮ ಅಸಾಧಾರಣ ಧೈರ್ಯ ಸಾಹಸಗಳಿಂದ ಅಜರಾಮರರಾಗಿದ್ದಾರೆ. ಬ್ರಿಟಿಷರ ಕುತಂತ್ರವನ್ನೆದುರಿಸಿ ಅವರ ವಿರುದ್ಧ ಹೋರಾಡಿ ಯುದ್ಧ ಗೆದ್ದ ಅವರ ಪರಾಕ್ರಮದ ಬಗ್ಗೆ ಇವತ್ತಿಗೂ ನಮ್ಮ ನಾಡಿನ ಮೂಲೆಮೂಲೆಗಳಲ್ಲೂ ಅವರನ್ನು ಸ್ಮರಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರದ ಮೋಕಾ ರಸ್ತೆಯ ಕೆಇಬಿ ವೃತ್ತದ ಬಳಿ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುತ್ಥಳಿ ಪ್ರತಿಷ್ಠಾಪನೆ, ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಸಮಾಜದ ಮುಖಂಡರು ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಬಿ.ಜಾನಕಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಮಹಾನಗರ ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಚೋರನೂರು ಕೊಟ್ರಪ್ಪ, ಮುಖಂಡರಾದ ಶಿವಕುಮಾರ, ಕಲ್ಲುಕಂಭ ಪಂಪಾಪತಿ, ಡಾ.ಸೋಮಶೇಖರ ರೆಡ್ಡಿ, ಹಾವಿನಾಳ ಶರಣಪ್ಪ, ಅಸುಂಡಿ ನಾಗರಾಜ, ಕೋಳೂರು ಚಂದ್ರೇಗೌಡ, ಮುಕ್ಕಣ್ಣ, ನೀಲನಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ಗಮನ ಸೆಳೆದ ಮೆರವಣಿಗೆ, ಕಲಾತಂಡ:*
ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆ ಹಾಗೂ ಸಾಂಸ್ಕøತಿಕ ಕಲಾ ತಂಡಗಳು ಗಮನಸೆಳೆದವು.
ನಗರದ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು, ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ನೂತನ ಜಿಲ್ಲಾಡಳಿತ ಭವನದಿಂದ ಆರಂಭವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಾಂಸ್ಕøತಿಕ ಸಮುಚ್ಚಯ ಆವರಣದ ಹೊಂಗಿರಣದ ವೇದಿಕೆ ಕಾರ್ಯಕ್ರಮಕ್ಕೆ ತಲುಪಿತು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)






































