ಸೋಮವಾರ, ಅಕ್ಟೋಬರ್ 30, 2023
ದೈಹಿಕ, ಮಾನಸಿಕ ಪೆÇೀಷಕಾಂಶ ಅಯೋಡಿನ್: ಡಾ.ಮರಿಯಂಬಿ ವಿ.ಕೆ
ಬಳ್ಳಾರಿ,ಅ.30(ಕರ್ನಾಟಕ ವಾರ್ತೆ):
ಅಯೋಡಿನ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ ಪೋಷಕಾಂಶವಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ, ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಅಯೋಡಿನ್ ಯುಕ್ತ ಉಪ್ಪು ನಿಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯದ ಸಂರಕ್ಷಕ” ಎಂಬ ಧ್ಯೇಯವಾಕ್ಯದೊಂದಿಗೆ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಆಯೋಡಿನ್ ಕೊರತೆಯ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಸರಿಪಡಿಸಲಾಗದ ದೈಹಿಕ ಹಾಗೂ ಮಾನಸಿಕ ವಿಕಲತೆ, ಅಂಗಾಂಗಗಳ ಕುಂಠಿತ ಬೆಳವಣಿಗೆ ಹಾಗೂ ಇತರೆ ಸಮಸ್ಯೆಗಳು ಉಂಟಾಗುತ್ತವೆ. ವಯಸ್ಕರಲ್ಲಿ ಅಯೋಡಿನ್ ಕೊರತೆ ಉಂಟಾದರೆ ನಿಶ್ಯಕ್ತಿ, ಕಾರ್ಯನಿರ್ವಹಣೆಯಲ್ಲಿ ವೈಫಲ್ಯತೆ ಕಾಣಬಹುದು. ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ಉಂಟಾದರೆ ಪದೇ ಪದೇ ಗರ್ಭಪಾತವಾಗುವುದು, ಸಂತಾನೋತ್ಪತ್ತಿಯ ತೊಂದರೆ, ಅಂಗವಿಕಲತೆ, ಬುದ್ಧಿಮಾಂದ್ಯತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇದೆ ಎಂದು ತಿಳಿಸಿಕೊಟ್ಟರು.
ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದು. ಸಾಮಾನ್ಯವಾಗಿ ವಯಸ್ಕರಿಗೆ ಒಂದು ದಿನಕ್ಕೆ 150 ಮೈಕ್ರೋ ಗ್ರಾಂ, ಗರ್ಭಿಣಿ, ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, 11 ತಿಂಗಳವರೆಗಿನ ಮಗುವಿಗೆ 50 ಮೈಕ್ರೋ ಗ್ರಾಂ, 1 ವರ್ಷದಿಂದ 5 ವರ್ಷದವರೆಗಿನ ಮಕ್ಕಳಿಗೆ 90 ಮೈಕ್ರೋ ಗ್ರಾಂ ಹಾಗೂ 5 ರಿಂದ 16 ವಯಸ್ಸಿನ ಮಕ್ಕಳಿಗೆ 120 ಮೈಕ್ರೋ ಗ್ರಾಂ. ಅಯೋಡಿನ್ ಅಗತ್ಯವಿದೆ ಎಂದು ತಿಳಿಸಿದರು.
ಆಹಾರ ಪದಾರ್ಥಗಳಾದ ಹಾಲು, ಮೊಟ್ಟೆ, ಕ್ಯಾರೆಟ್, ಹಸಿರು ತರಕಾರಿಗಳು, ಸೀಗಡಿ, ಮೀನು, ಹಣ್ಣುಗಳು, ಅಯೋಡಿನ್‍ಯುಕ್ತ ಉಪ್ಪು ಇವುಗಳನ್ನು ತಪ್ಪದೇ ಸೇವಿಸಿ ಅಯೋಡಿನ್ ಅಂಶವನ್ನು ಪಡೆಯಬೇಕು ಹಾಗೂ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
ಆರೋಗ್ಯ ಇಲಾಖೆಯ ತಂಡ ಮನೆ ಮನೆಗೆ ಭೇಟಿ ನೀಡಿ ಉಪ್ಪಿನ ಮಾದರಿಯನ್ನು ಸಂಗ್ರಹಿಸಿ ಅಯೋಡಿನ್ ಪ್ರಮಾಣವನ್ನು ಗುರುತಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ.ಮಂಜುನಾಥ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಯೋಡಿನ್‍ಯುಕ್ತ ಉಪ್ಪನ್ನು ಮಿತವಾಗಿ ಬಳಸಬೇಕು. ಹೆಚ್ಚಾದರೆ ಹಾಗೂ ಕಡಿಮೆಯಾದರೆ ನ್ಯೂನ್ಯತೆ ಉಂಟಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪ್ಪಿನಲ್ಲಿ ಇರುವ ಅಯೋಡಿನ್ ಪ್ರಮಾಣ ಪರೀಕ್ಷೆಯ ಪ್ರಾತ್ಯಕ್ಷತೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ಈ ಸಂದರ್ಭದಲ್ಲಿ ಗಾಂಧಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಎಪಿಡಮಾಲಾಜಿಸ್ಟ್ ಡಾ.ಪ್ರಿಯಾಂಕ, ಜಿಲ್ಲಾ ಮೈಕ್ರೋಬಯಲಾಜಿಸ್ಟ್ ಡಾ.ಶರತ್‍ಬಾಬು, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪಲ್ಲವಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)





ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ