ಮಂಗಳವಾರ, ಅಕ್ಟೋಬರ್ 31, 2023

ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನ ಯಶಸ್ವಿಗೊಳಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಅ.31(ಕರ್ನಾಟಕ ವಾರ್ತೆ): ಮಹಾತ್ಮ ಗಾಂಧೀಜಿಯವರು ಕಂಡ ಕನಸು “ಕುಷ್ಠರೋಗ ಮುಕ್ತ ಭಾರತ” ನನಸಾಗಿಸಲು, ಕುಷ್ಠರೋಗ ಪ್ರಕರಣಗಳಿಂದ ಉಂಟಾಗುವ ಅಂಗವಿಕಲತೆಯನ್ನು ಕಡಿಮೆ ಮಾಡಲು ಮತ್ತು ಸುಪ್ತ ಕುಷ್ಠರೋಗ ಪ್ರಕರಣಗಳನ್ನು ಮುಂಜಾಗ್ರತೆ ಕ್ರಮವಹಿಸಿ ಪತ್ತೆ ಹಚ್ಚುವ ಉದ್ದೇಶದಿಂದ ನವೆಂಬರ್ 15 ರಿಂದ ಡಿಸೆಂಬರ್ 2 ರವರೆಗೆ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಅಧಿಕಾರಿಗಳಿಗೆ ಕರೆ ನೀಡಿದರು. ನಗರದ ಜಿಲ್ಲಾ ಪಂಚಾಯತ್‍ನ ನಜೀರ್‍ಸಾಬ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಆರೋಗ್ಯ ಇಲಾಖೆಯ ಸಭೆಯಲ್ಲಿ ಅವರು ಮಾತನಾಡಿ, ಕುಷ್ಠರೋಗ ಸಾಂಕ್ರಾಮಿಕ ರೋಗವಾಗಿದ್ದು, ಇದು ಮೈಕೋಬ್ಯಾಕ್ಟೀರಿಯ ಲೆಪ್ರೈ ಎಂಬ ರೋಗಾಣುವಿನಿಂದ ಬರುತ್ತದೆ. ಇದು ಚಿಕಿತ್ಸೆ ಪಡೆಯದೇ ಇರುವ ಕುಷ್ಠರೋಗಿಯು ಕೆಮ್ಮಿದಾಗ ಸೀನಿದಾಗ ತುಂತುರು ಹನಿಗಳು ಉಸಿರಾಡುವ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದೆ. ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಅಂಗವಿಕಲತೆಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದರು. ಈ ವಿಶೇಷ ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಮನೆ-ಮನೆ ಭೇಟಿ ಮಾಡಿ ಮನೆಯಲ್ಲಿರುವ 2 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಿ ಶಂಕಿತ ಪ್ರಕರಣಗಳನ್ನು ಪತ್ತೆಹಚ್ಚಿ ಮಾಹಿತಿ ಸಂಗ್ರಹಿಸುತ್ತಾರೆ. ಅವರು ರೆಫರಲ್ ಫಾರಂ ನೀಡಿ ಜಿಲ್ಲೆಯ ವೈದ್ಯಾಧಿಕಾರಿಗಳ ಬಳಿ ತಪಾಸಣೆ ಮಾಡಿಸಿಕೊಳ್ಳಲು ಶಿಫಾರಸ್ಸು ಮಾಡುತ್ತಾರೆ. ತಪಾಸಣೆ ನಂತರ ಕುಷ್ಠರೋಗ ಎಂದು ಧೃಡಪಟ್ಟ ಮೇಲೆ ಅಗತ್ಯ ಚಿಕಿತ್ಸೆ ನೀಡುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ ಕಂಡುಬಂದಿರುವ 77 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಅಭಿಯಾನವನ್ನು ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದ್ದು, ಒಟ್ಟು 2,75,452 ಮನೆಗಳ ತಪಾಸಣಾ ಸಮೀಕ್ಷೆ ಕೈಗೊಳ್ಳಲಾಗುವುದು. ಈ ತಪಾಸಣಾ ಸಮೀಕ್ಷೆ ಮಾಡಲು 1211 ಜನರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡದಲ್ಲಿ ಆಶಾ ಕಾರ್ಯಕರ್ತೆಯರು ಅಥವಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪುರುಷ ಸ್ವಯಂಸೇವಕರು ಇರುತ್ತಾರೆ. ಈ ತಂಡಗಳ ಕಾರ್ಯವನ್ನು ಮರು ಮೇಲ್ವಿಚಾರಣೆ ಮಾಡಲು 241 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಮುಖ್ಯವಾಗಿ ವಲಸೆ ಕಾರ್ಮಿಕರು ಕಾರ್ಯನಿರ್ವಹಿಸುವ ಇಟ್ಟಿಗೆ ಬಟ್ಟಿಗಳು, ಬಿಂಚೆ ಮಶಿನ್‍ಗಳು, ಸಿಮೆಂಟ್ ಬ್ರಿಕ್ಸ್‍ಗಳು, ರೈಸ್ ಮಿಲ್‍ಗಳು, ಇಂಡಸ್ಟ್ರಿಗಳು ಇತರೆ 101 ಸ್ಥಳಗಳನ್ನು ಗುರುತಿಸಲಾಗಿದೆ, ಇಲ್ಲಿ 10 ತಂಡಗಳು ಭೇಟಿ ನೀಡಿ ತಪಾಸಣಾ ಸಮೀಕ್ಷೆ ಮಾಡುತ್ತಾರೆ. ಈ ತಂಡಗಳನ್ನು 5 ಮೇಲ್ವಿಚಾರಕರು ಮರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ವಿವರಿಸಿದರು. ತಪಾಸಣೆ ಮಾಡಲು ತಂಡಗಳು ತಮ್ಮ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಕುಷ್ಠರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನದ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಜಿ.ವೀರೇಂದ್ರ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ್, ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಯವರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ