ಶುಕ್ರವಾರ, ಅಕ್ಟೋಬರ್ 27, 2023
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಆರಂಭ; ಆಕ್ಷೇಪಣೆ ಸಲ್ಲಿಸಲು ಅವಕಾಶ: ಡಾ.ತ್ರಿಲೋಕ ಚಂದ್ರ
ಬಳ್ಳಾರಿ,ಅ.27(ಕರ್ನಾಟಕ ವಾರ್ತೆ):
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯಲ್ಲಿ ಇಂದು (ಅ.27ರಂದು) ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಲಾಗಿದ್ದು, ಕರಡು ಮತದಾರರ ಪಟ್ಟಿಯ ಕುರಿತು ಮತದಾರರಲ್ಲಿ ಯಾವುದಾದರೂ ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ಸಲ್ಲಿಸಬಹುದು ಎಂದು ಮತದಾರರ ಪಟ್ಟಿ ಪರಿವೀಕ್ಷಕರೂ ಆಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ ಚಂದ್ರ ಅವರು ಹೇಳಿದರು.
ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕರಣೆ 01-01-2024ರ ಕುರಿತಂತೆ ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜಿಲ್ಲೆಯಲ್ಲಿನ ಎಲ್ಲಾ ಮತದಾರರ ನೊಂದಣಾಧಿಕಾರಿಗಳು, ಸಹಾಯಕ ಮತದಾರರ ನೊಂದಣಾಧಿಕಾರಿಗಳೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಅಕ್ಟೊಬರ್ 27, 2023 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಕರಡು ಮತದಾರರ ಯಾದಿಯಲ್ಲಿ ಹೆಸರು ಇರುವ ಬಗ್ಗೆ ಮತ್ತು ಹೆಸರು ತಪ್ಪಾಗಿ ನಮೂದಾಗಿದ್ದರೆ ಹಾಗೂ ಹೊಸದಾಗಿ ಹೆಸರು ಸೇರ್ಪಡೆಗಾಗಿ (ನಮೂನೆ-6), ಹೆಸರು ತೆಗೆದು ಹಾಕಲು (ನಮೂನೆ-7), ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿಗಾಗಿ (ನಮೂನೆ-8) ಹಾಗೂ ವಿಧಾನಸಭಾ ಮತಕ್ಷೇತ್ರದಲ್ಲಿನ ವಿಳಾಸ ತಿದ್ದುಪಡಿ, ಬದಲಾವಣೆಗಾಗಿ (ನಮೂನೆ-8ಎ) ಅರ್ಜಿಗಳನ್ನು ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಇಂದಿನಿಂದ (ಅ.27 ರಿಂದ) ಡಿಸೆಂಬರ್ 09 ರೊಳಗಾಗಿ ಜಿಲ್ಲೆಯಲ್ಲಿನ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ನೊಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಚೇರಿಗೆ ಕೆಲಸದ ಸಮಯದಲ್ಲಿ ನಿಗಧಿತ ನಮೂನೆಗಳಲ್ಲಿ (Form-06, Form-07, Form-08) ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಬಿಎಲ್‍ಎ (Booth Level Agent)) ಗಳನ್ನು ತಮ್ಮ ತಮ್ಮ ಪಕ್ಷಗಳಿಂದ ಆಯ್ಕೆ ಮಾಡಿ ನಿಗಧಿತ ನಮೂನೆಗಳಲ್ಲಿ ಭರ್ತಿ ಮಾಡಿ 07 ದಿನಗಳೊಳಗಾಗಿ ವಿಧಾನಸಭಾ ಕ್ಷೇತ್ರವಾರು ಆಯಾ ಮತದಾರ ನೊಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಹೇಳಿದರು.
*ಪ್ರಸ್ತಾವಿತ ಕರಡು ಪಟ್ಟಿಯ ಪ್ರಕಾರ ಮತದಾರರು ನೊಂದಣಿಯಾದ ಸಂಖ್ಯೆ ವಿವರ:*
91- ಕಂಪ್ಲಿ ವಿಧಾನಸಭಾ ಕ್ಷೇತ್ರ:
ಪುರುಷರು - 107773, ಮಹಿಳೆಯರು - 109648, ಒಟ್ಟು 217421.
92 - ಸಿರುಗುಪ್ಪ ವಿಧಾನಸಭಾ ಕ್ಷೇತ್ರ:
ಪುರುಷರು - 107622, ಮಹಿಳೆಯರು - 111582, ಒಟ್ಟು 219204.
93 - ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ಪುರುಷರು - 117504, ಮಹಿಳೆಯರು - 123963, ಒಟ್ಟು 241467.
94 - ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ:
ಪುರುಷರು - 127889, ಮಹಿಳೆಯರು - 135390, ಒಟ್ಟು 263279.
95 - ಸಂಡೂರು ವಿಧಾನಸಭಾ ಕ್ಷೇತ್ರ:
ಪುರುಷರು - 113141, ಮಹಿಳೆಯರು - 112983, ಒಟ್ಟು 226124.
ಜಿಲ್ಲೆಯಲ್ಲಿ ಒಟ್ಟು ಪುರುಷರು - 573929, ಮಹಿಳೆಯರು - 593566, ಒಟ್ಟು 1167495.
ಸ್ವೀಕೃತಗೊಂಡ ಹಕ್ಕು ಮತ್ತು ತಕರಾರುಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು ಡಿಸೆಂಬರ್ 26, 2023ರ ಒಳಗಾಗಿ ಇತ್ಯರ್ಥಪಡಿಸುವುದು. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಜನವರಿ 05, 2024 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಸೇರಿದಂತೆ ಸಹಾಯಕ ಮತದಾರ ನೋಂದಣಾಧಿಕಾರಿಗಳು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ