ಗುರುವಾರ, ಅಕ್ಟೋಬರ್ 12, 2023

ಶಾಶ್ವತ ಚೆಕ್‍ಪೋಸ್ಟ್ ನಿರ್ಮಾಣ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ,ಅ.12(ಕರ್ನಾಟಕ ವಾರ್ತೆ): ನಗರದ ಹೊರವಲಯದಲ್ಲಿ ತಾತ್ಕಾಲಿಕ ಶೆಡ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್‍ಪೋಸ್ಟ್‍ಗಳನ್ನು ಬದಲಾಯಿಸಿ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು. ಗುರುವಾರಂದು, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ನಗರದಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ನಿಗಾವಹಿಸಲು ಅನಂತಪುರ ರಸ್ತೆಯ ಹೊರವಲಯದ ಚೆಕ್‍ಪೋಸ್ಟ್, ಬೆಂಗಳೂರು ರಸ್ತೆ (ಅನಂತಪುರ ಬೈಪಾಸ್ ರಸ್ತೆ), ಬೆಂಗಳೂರು ರಸ್ತೆ (ರೈಲ್ವೆಗೇಟ್ ರಸ್ತೆ) ಹಾಗೂ ಹೊಸಪೇಟೆ ಬೈಪಾಸ್ ರಸ್ತೆ ಸೇರಿದಂತೆ 4 ವಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗುವುದು ಎಂದರು. ನಗರದ ಹೊರವಲಯದ ಮುಂಡರಿಗಿ ಕೈಗಾರಿಕಾ ಪ್ರದೇಶ ವಲಯ ಹಾಗೂ ಬೆಂಗಳೂರು ರಸ್ತೆಯ ರೈಲ್ವೇ ಗೇಟ್ ನಂ.06ನ ರಾಷ್ಟ್ರೀಯ ಹೆದ್ದಾರಿಯು ಪದೇ-ಪದೇ ದುರಸ್ಥಿಗೊಳ್ಳುತ್ತಿದ್ದು, ಇದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧವಿದ್ದು, ಅಂತಹ ವಾಹನಗಳು ಕಂಡುಬಂದಲ್ಲಿ ತಪಾಸಣೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. *ಯುಜಿಡಿಯಿಂದ ರಸ್ತೆಗಳಲ್ಲಿ ತಗ್ಗು-ಗುಂಡಿ:* ನಗರದಲ್ಲಿ ಕೆಲವೆಡೆ ಒಳಚರಂಡಿ ಕಾಮಗಾರಿ (ಯುಜಿಡಿ) ಕೈಗೊಂಡಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ಮೊದಲಿನ ಸ್ಥಿತಿಗೆ ತರದೇ, ಅಲ್ಲಲ್ಲಿ ಉಬ್ಬು, ತಗ್ಗುಗಳು ನಿರ್ಮಾಣವಾಗಿವೆ, ಇದರಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ, ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ನಗರದಾದ್ಯಂತ ರಸ್ತೆಗಳನ್ನು ಪರಿಶೀಲಿಸಿ, ಯುಜಿಡಿ ಕಾಮಗಾರಿಯಿಂದ ರಸ್ತೆಯಲ್ಲಿ ಆಗಿರುವ ಉಬ್ಬು ತಗ್ಗುಗಳನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚನೆ ನೀಡಿದರು. *ನಗರದಲ್ಲಿ ವಿವಿಧೆಡೆ ಆಟೋ ಸ್ಟ್ಯಾಂಡ್ ನಿರ್ಮಾಣ:* ಆಟೋ ಚಾಲಕರು, ತಮಗೆ ಅನುಕೂಲವಾಗುವ ಕಡೆಗಳಲ್ಲಿ ತಾವೇ ಜಾಗ ಗುರುತಿಸಿಕೊಂಡು, ನಿಲ್ಲಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸುಗಮ ಸಂಚಾರಕ್ಕೆ ನಗರದಲ್ಲಿ 9 ಕಡೆ ಅಟೋ ಸ್ಟ್ಯಾಂಡ್ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಒಟ್ಟು 09 ಕಡೆ ಆಟೋ ನಿಲ್ದಾಣಗಳನ್ನು ಸ್ಥಾಪಿಸಲಾಗುತ್ತಿದೆ. ರಾಯಲ್ ವೃತ್ತ, ಎಪಿಎಂಸಿ ಮಾರುಕಟ್ಟೆ ಹತ್ತಿರ, ಪ್ರಭಾತ್ ಚಿತ್ರಮಂದಿರ ಮುಂದೆ, ಹೊಸ ಬಸ್‍ನಿಲ್ದಾಣ ಹತ್ತಿರ, ಒಪಿಡಿ ವೃತ್ತ, ವಿಮ್ಸ್ ಆಸ್ಪತ್ರೆ ಹತ್ತಿರ, ಎಸ್‍ಪಿ ವೃತ್ತ, ಸಂಗಮ್ ವೃತ್ತ ಹಾಗೂ ಜಿಲ್ಲಾಸ್ಪತ್ರೆ ಬಳಿ ಆಟೋ ಸ್ಟ್ಯಾಂಡ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ನಟರಾಜ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹೇಮಂತ್‍ರಾಜ್ ಸೇರಿದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ