ಮಂಗಳವಾರ, ಅಕ್ಟೋಬರ್ 10, 2023

ಬಳ್ಳಾರಿ ಮಹಾನಗರ ಪಾಲಿಕೆ: ಮಾಲೀಕರು ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ

ಬಳ್ಳಾರಿ,ಅ.10(ಕರ್ನಾಟಕವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳನ್ನು ಸಂಬಂಧಿಸಿದ ಮಾಲೀಕರು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್‍ಸಾಬ್ ಅವರು ತಿಳಿಸಿದ್ದಾರೆ. ನಗರದಲ್ಲಿ ಹಲವಾರು ಖಾಸಗಿ ಖಾಲಿ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸದೇ ಹಾಗೇ ಬಿಟ್ಟಿದ್ದು, ಆ ನಿವೇಶನಗಳಲ್ಲಿ ಸಂಗ್ರಹಗೊಂಡ ತ್ಯಾಜ್ಯ/ಜಾಲಿ, ಗಿಡಕಂಟಿ, ಇತ್ಯಾದಿಗಳಿಂದ ಅಸ್ವಚ್ಛತೆ ಮತ್ತು ಅನೈರ್ಮಲ್ಯದಿಂದ ಪರಿಸರ ಹಾಳಾಗುತ್ತಿದೆ. ಸೊಳ್ಳೆ ಮತ್ತು ಹಂದಿಗಳ ವಾಸಸ್ಥಳವಾಗಿ ಮಾರ್ಪಾಡಾಗಿರುವುದು ಕಂಡುಬಂದಿದೆ. ಆದ್ದರಿಂದ ಅ.31ರೊಳಗಾಗಿ ಖುದ್ದಾಗಿ ತಮ್ಮ ತಮ್ಮ ಖಾಲಿ ನಿವೇಶನಗಳನ್ನು ಸಂಬಂಧಿಸಿದ ಮಾಲೀಕರು ಸ್ವಚ್ಛತೆ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ ಖಾಲಿ ನಿವೇಶನ ಮಾಲೀಕರಿಂದ ವೆಚ್ಚವನ್ನು ಪ್ರತಿ ಚದರ ಅಡಿಗೆ ರೂ.2ರಂತೆ ಆಸ್ತಿ ತೆರಿಗೆ ಜೊತೆಗೆ ಪ್ರತಿ ಬಾರಿ ವಸೂಲಿ ಮಾಡಲಾಗುವುದು ಹಾಗೂ ಸದರಿ ಮೊತ್ತವನ್ನು ಬಾಕಿ ಎಂದು ಪರಿಗಣಿಸಿ ಬೋಜ ಕೂರಿಸಲಾಗುವುದು. ಇಲ್ಲವಾದಲ್ಲಿ ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976, ಸೆಕ್ಷನ್ 333 ಮತ್ತು 334 ರಂತೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ