ಶನಿವಾರ, ಅಕ್ಟೋಬರ್ 21, 2023

ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿರ್ವಹಿಸಲು ಸೂಕ್ತ ಸಲಹೆ ನೀಡಿ: ಡಾ.ಉಮಾ ಬುಗ್ಗಿ

ಬಳ್ಳಾರಿ,ಅ.21(ಕರ್ನಾಟಕ ವಾರ್ತೆ): ಇತ್ತೀಚಿನ ಜೀವನ ಶೈಲಿಯ ರೋಗಗಳಾದ ರಕ್ತದೊತ್ತಡ, ಸಕ್ಕರೆ ಕಾಯಿಲೆ ಒಮ್ಮೆ ಗುರುತಿಸಿದ ನಂತರ ವೈದ್ಯರ ಸಲಹೆ ಮೇರೆಗೆ ನಿಯಮಿತ ಔಷಧಿ, ಆಪ್ತ ಸಮಾಲೋಚನೆ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ನಿರ್ದೇಶನಾಯಲದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮದ ಸಹ ನಿರ್ದೇಶಕಿ ಡಾ.ಉಮಾ ಬುಗ್ಗಿ ಅವರು ಹೇಳಿದರು. ಅವರು, ಶನಿವಾರದಂದು ಜಿಲ್ಲಾ ಆಸ್ಪತ್ರೆಯ ಅಸಾಂಕ್ರಾಮಿಕ ರೋಗಗಳ ನಿರ್ವಹಣಾ ವಿಭಾಗ, ಹೆರಿಗೆ ವಿಭಾಗ, ಪಿಜಿಯೋಥೆರಫಿ, ಇಸಿಜಿ, ಇಕೋ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚಿಸಿದರು. ಆಸ್ಪತ್ರೆಗಳಿಗೆ ತಪಾಸಣೆಗೆ ಆಗಮಿಸುವ ಪ್ರತಿಯೊಬ್ಬರಿಗೂ ಔಷದೋಪಚಾರದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು. 10-15 ಜನರ ಗುಂಪು ಮಾಡಿ ಜೀವನ ಶೈಲಿಯ ಬದಲಾವಣೆಯ ಕುರಿತು ಆಪ್ತ ಸಮಾಲೋಚನೆ ಮಾಡಬೇಕು ಎಂದರು. ಹಿರಿಯ ನಾಗರಿಕರ ಆರೈಕೆಗೆ ಪ್ರತ್ಯೇಕ ಹಾಸಿಗೆಗಳನ್ನು ಮಿಸಲಿಟ್ಟಿರುವ ವಾರ್ಡ್ ಪರಿಶೀಲಿಸಿ, ಗರ್ಭಿಣಿಯರ ತಪಾಸಣಾ ವಿಭಾಗದಲ್ಲಿ ಪ್ಯಾಪ್‍ಸ್ಮೀಯರ್ ಮೂಲಕ ಕ್ಯಾನ್ಸರ್ ಪರೀಕ್ಷೆ ಕೈಗೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಸ್ಥಾನಿಕ ವೈದ್ಯರಾದ ಡಾ.ವಿಶ್ವನಾಥ.ಹೆಚ್, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ತಜ್ಞ ವೈದ್ಯರಾದ ಡಾ.ಜ್ಞಾನ ಅಭಿಲಾಷ್, ಡಾ.ಯೋಗಾನಂದ ರೆಡ್ಡಿ, ಡಾ.ಅನೀಲ್ ರೆಡ್ಡಿ, ಎನ್‍ಸಿಡಿ ಜಿಲ್ಲಾ ಸಲಹೆಗಾರ ಡಾ.ಜಬಿನ್ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಶುಶ್ರೂಷಣಾ ಅಧೀಕ್ಷಕ ವೈ.ಸೇಲಿನಾ ಸೇರಿದಂತೆ ಆಪ್ತ ಸಮಾಲೋಚಕರು, ಪಿಜಿಯೋಥೆರಪಿಸ್ಟ್ ಹಾಗೂ ಇತರರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ