ಸೋಮವಾರ, ಅಕ್ಟೋಬರ್ 16, 2023

ಸಂಡೂರಿನಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಒಟ್ಟು 153 ಅರ್ಜಿ ಸ್ವೀಕಾರ, ಸ್ಥಳದಲ್ಲಿಯೇ 25 ಅರ್ಜಿ ಇತ್ಯರ್ಥ

ಬಳ್ಳಾರಿ,ಅ.16(ಕರ್ನಾಟಕ ವಾರ್ತೆ): ಮುಖ್ಯಮಂತ್ರಿಗಳ ನಿರ್ದೇಶನದಂತೆ, ಆಡಳಿತಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಾಗೂ ಸಾರ್ವಜನಿಕರ ಸರ್ಕಾರೇತರ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕಾಗಿ ತಾಲ್ಲೂಕು ಮಟ್ಟದಲ್ಲಿಯೂ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸಂಡೂರು ಇವರ ಆಶ್ರಯದಲ್ಲಿ ಸಂಡೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ವಿಭಾಗ, ಎಪಿಎಂಸಿ ಆವರಣದಲ್ಲಿ ಸೋಮವಾರದಂದು “ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ” ನಡೆಯಿತು. ಕಾರ್ಯಕ್ರಮಕ್ಕೆ ಸಂಡೂರು ಶಾಸಕ ಈ.ತುಕರಾಂ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ಕುಂದುಕೊರತೆಗಳಿದ್ದಲ್ಲಿ ತಾಲೂಕು ಮಟ್ಟದಲ್ಲಿ ನಡೆಯುವ ಜನತಾ ದರ್ಶನದಲ್ಲಿ ಭಾಗವಹಿಸಿ ಅರ್ಜಿ ಸಲ್ಲಿಸುವ ಮೂಲಕ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ದೂರು ನಿವಾರಣೆಗೆ ಅವಕಾಶವಿದ್ದು, ಕಾಲಮಿತಿಯಲ್ಲಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಹೇಳಿದರು. ಜನತಾ ದರ್ಶನದ ವೇಳೆ ದಾಖಲಾದ ಕುಂದುಕೊರತೆಗಳ ಸಮಗ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ (ಐಪಿಜಿಆರ್‍ಎಸ್) ತಂತ್ರಾಂಶಕ್ಕೆ ಲಾಗ್‍ಇನ್ ಮಾಡಿ, ಆಯಾ ಇಲಾಖೆಗೆ ತ್ವರಿತವಾಗಿ ತಲುಪಿಸಲಾಗುವುದು ಎಂದು ಹೇಳಿದ ಅವರು, ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾಲಮಿತಿಯಲ್ಲಿ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಿದ್ದಾರೆ ಎಂದರು. *ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಶಾಸಕ ಈ.ತುಕಾರಾಂ:* ತಾಲ್ಲೂಕು ಮಟ್ಟದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಈಗಾಗಲೇ ಬರ ಸಮಸ್ಯೆ ತೋರಿದ್ದು, ಮುಂದಿನ ದಿನಗಳಲ್ಲಿ ಸಂಡೂರು ಭಾಗದ 44 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸಂಡೂರು ತಾಲೂಕಿನಲ್ಲಿ 416 ಶಿಕ್ಷಕರಿದ್ದಾರೆ, ಆದರೆ ದೈಹಿಕ ಶಿಕ್ಷಕರ ಕೊರತೆ ಇದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಲ್ಲಿ ಶಿಕ್ಷಕರ ನೇಮಕ ಮಾಡಿಕೊಡಬೇಕು ಎಂದು ಹೇಳಿದರು. ಅದೇ ರೀತಿಯಾಗಿ, ಸಂಡೂರು-ಹೊಸಪೇಟೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ, ಇದನ್ನು ನಿವಾರಣೆ ಮಾಡಬೇಕು ಎಂದು ಶಾಸಕರು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಗಮನಕ್ಕೆ ತಂದರು. ತಾಲೂಕು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ವಾಹನಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ಅವುಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. *ಒಟ್ಟು 153 ಅರ್ಜಿ ಸಲ್ಲಿಕೆ, 25 ಅರ್ಜಿ ಇತ್ಯರ್ಥ:* ಸಂಡೂರಿನಲ್ಲಿ ನಡೆದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ, ಒಟ್ಟು 153 ಅರ್ಜಿ ಸಲ್ಲಿಕೆಯಾದವು. ಅದರಲ್ಲಿ 25 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಯಿತು. ಉಳಿದವುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಶಾಸಕ ಈ.ತುಕಾರಾಂ ತಿಳಿಸಿದರು. ಕಂದಾಯ ಇಲಾಖೆ 103, ತಾಲ್ಲೂಕು ಪಂಚಾಯಿತಿ 21, ಅರಣ್ಯ ಇಲಾಖೆ 2, ಡಿಎಂಜಿ 03, ಪುರಸಭೆ 05, ಶಿಕ್ಷಣ ಇಲಾಖೆ 05, ಸಿಡಿಪಿಒ 02, ಕೃಷಿ ಮತ್ತು ಪೊಲೀಸ್ ಇಲಾಖೆ 01, ಲೋಕೋಪಯೋಗಿ ಇಲಾಖೆ 03, ಜೆಸ್ಕಾಂ 03, ಸರ್ವೇ ಇಲಾಖೆ 01, ಪಶು ಸಂಗೋಪನಾ ಇಲಾಖೆ 01, ಆರೋಗ್ಯ ಇಲಾಖೆ 01, ಅಬಕಾರಿ ಇಲಾಖೆ 01 ಹಾಗೂ ಎನ್‍ಎಂಡಿಸಿ 01 ಸೇರಿದಂತೆ ಒಟ್ಟು 153 ಅರ್ಜಿ ಸ್ವೀಕಾರಗೊಂಡವು. ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕಾರ ಮಾಡಲು ಒಟ್ಟು 20 ಕೌಂಟರ್ ಹಾಕಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ, ಆಂಬ್ಯುಲೆನ್ಸ್ ವ್ಯವಸ್ಥೆ ಹಾಗೂ ಅಗ್ನಿ ಶಾಮಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಜನರು ತಮ್ಮ ಅಹವಾಲು ಸಲ್ಲಿಸಲು ಆಗಮಿಸಿದ್ದರು. ಸಂಡೂರು ಶಾಸಕ ಈ.ತುಕಾರಾಂ ಅವರು ಉತ್ಸುಕರಾಗಿಯೇ ಸಾರ್ವಜನಿಕ ಅಹವಾಲು ಸ್ವೀಕಾರ ಮಾಡಿದರು, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹಾರ ನೀಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಡಿವೈಎಸ್ಪಿ ಪ್ರಸಾದ್ ಗೋಖಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು, ಸಂಡೂರು ತಹಶೀಲ್ದಾರ ಅನೀಲ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ********* 4 ವರ್ಷಗಳಿಂದ ನಮ್ಮ ಊರಿನ ಅಂಗನವಾಡಿ ಶಾಲೆ ಸುತ್ತ ಮುತ್ತ ಜಾಲಿ ಗಿಡ ಬೆಳೆದಿದೆ. ಮುಂದೆ ಇರುವ ಚರಂಡಿಯಲ್ಲಿ ನೀರು ತುಂಬಿ, ಗಬ್ಬು ನಾರುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಆದ್ದರಿಂದ ಜನತಾ ದರ್ಶನದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರ್ಜಿ ಸಲ್ಲಿಸಲು ಬಂದಿರುವೆ. - ಕಲ್ಲಪ್ಪ, ರೈತ ಮುಖಂಡ, ಚಿಕ್ಕ ಕೆರೆಗನಹಳ್ಳಿ. “ನಾನು ಕಳೆದ 09 ವರ್ಷಗಳಿಂದ ವೆಸ್ಕೊ ಕಂಪನಿಯಲ್ಲಿ ಆಯಿ ಕೆಲಸ ಮಾಡುತ್ತಿರುವೆ. ನನಗೆ ಇರಲು ವಸತಿ ವ್ಯವಸ್ಥೆ ಇಲ್ಲ. ಈಗಿರುವ ಮನೆಯನ್ನು ಬಿಡುವಂತೆ ಮಾಲೀಕರು ಒತ್ತಾಯ ಮಾಡುತ್ತಿದ್ದಾರೆ. ಪುರಸಭೆಯಿಂದ ನನಗೆ ವಸತಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕು” ಎಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಲು ಬಂದಿದ್ದ ಸಂಡೂರಿನ ಆಶ್ರಯ ಕಾಲೋನಿಯ ನಿವಾಸಿ ಹುಲಿಗೆಮ್ಮ ಅವರು ಹೇಳಿದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ