ಗುರುವಾರ, ಅಕ್ಟೋಬರ್ 19, 2023

ಸರ್ಕಾರದ ಜನಪರ ಯೋಜನೆಗಳ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ

ಬಳ್ಳಾರಿ,ಅ.19(ಕರ್ನಾಟಕ ವಾರ್ತೆ): ಸರ್ಕಾರದ ವಿವಿಧ ಯೋಜನೆಗಳ ಕುರಿತು ಗ್ರಾಮೀಣ ಭಾಗದ ಜನರಿಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಬೀದಿ ನಾಟಕ ಮತ್ತು ಜನಪದ ತಂಡಗಳ ಮೂಲಕ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ತೋರಣಗಲ್ಲು ಗ್ರಾಪಂ ಅಧ್ಯಕ್ಷ ವಿರೇಶಪ್ಪ ಅವರು ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಆಶ್ರಯದಲ್ಲಿ ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಚಿಗುರು ಕಲಾತಂಡದಿಂದ ಬುಧವಾರ ಏರ್ಪಡಿಸಿದ್ದ ಬೀದಿ ನಾಟಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಹಂತದಲ್ಲಿ ಸರ್ಕಾರದ ಯೋಜನೆಗಳನ್ನು ಬೀದಿ ನಾಟಕ ಮೂಲಕ ತಿಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂಬ ಅರಿವು ಮೂಡುತ್ತದೆ. ಆದ್ದರಿಂದ ಎಲ್ಲಾ ಯುವಕರು, ವಯಸ್ಕರು, ಗ್ರಾಮಸ್ಥರು ತಿಳಿದುಕೊಳ್ಳದೇ ಇರುವವರಿಗೆ ತಿಳಿಸಿದರೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಚಿಗುರು ಕಲಾತಂಡದ ಕಲಾವಿದರಾದ ಹುಲುಗಪ್ಪ.ಎಸ್.ಎಂ., ವೈ.ತಾಯಪ್ಪ ವಿಜಯ್, ಎರ್ರಿಸ್ವಾಮಿ ಆನಂದ, ರುತಮ್ಮ.ಎಚ್., ಗಂಗಮ್ಮ, ರಮೇಶ್ ಸೇರಿ ಸರ್ಕಾರದ ವಿವಿಧ ಯೋಜನೆಗಳ ಜೊತೆ ಪಂಚ ಗ್ಯಾರಂಟಿ ಯೋಜನೆಗಳನ್ನೂ ಸಹಿತ ಬೀದಿ ನಾಟಕದ ಮೂಲಕ ಜನರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ತೋರಣಗಲ್ಲು ಗ್ರಾಪಂ ಉಪಾಧ್ಯಕ್ಷೆ ಎನ್.ನಿಂಗಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ.ಯು ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮದ ಮುಖ್ಯಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ