ಶುಕ್ರವಾರ, ಅಕ್ಟೋಬರ್ 27, 2023

ಸಂಜೀವಿನಿ ಸ್ತ್ರೀ ಶಕ್ತಿ ಮಿನಿ ಸೂಪರ್ ಮಾರ್ಕೆಟ್ ಉದ್ಘಾಟನೆ ಗ್ರಾಮೀಣ ಬಡ ಮಹಿಳೆಯರಿಗೆ ಜೀವನೋಪಾಯ ರೂಪಿಸುವಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಒಂದು ಪ್ರಯತ್ನ

ಬಳ್ಳಾರಿ,ಅ.27(ಕರ್ನಾಟಕ ವಾರ್ತೆ): ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯಡಿಯಲ್ಲಿ ಬಳ್ಳಾರಿ ಜಿಲ್ಲಾ ಪಂಚಾಯತ್ ಮೂಲಕ ರೂಪಿಸಿರುವ ಚಟುವಟಿಕೆಗಳಲ್ಲಿ ಉತ್ತಮ ಪ್ರಗತಿ ಕಾಣುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಹೊರಹೊಮ್ಮುತ್ತಿರುವುದು ಬೆಳಕಿಗೆ ಬಂದಿರುತ್ತದೆ. ಈಗಾಗಲೇ ರಚಿಸಿರುವ 100 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಸುಮಾರು 6440 ಮಹಿಳಾ ಗುಂಪುಗಳನ್ನು ರಚಿಸಿ, ಸುಮಾರು 2093 ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿಯನ್ನು ಸ್ವ-ಸಹಾಯ ಗುಂಪುಗಳಿಗೆ ಸಾಲದ ರೂಪದಲ್ಲಿ ವಿತರಿಸಿ ವಿವಿಧ ಜೀವನೋಪಾಯ ಚಟುವಟಿಕೆಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಯೋಜನೆಯ ಮೂಲಕ ಪ್ರಯತ್ನಿಸುತ್ತಿದೆ. ಬಳ್ಳಾರಿ ಜಿಲ್ಲಾ ಹಂತದಲ್ಲಿ ಆಯ್ದ ಸ್ವ ಸಹಾಯ ಗುಂಪು/ಗ್ರಾ.ಪಂ ಮಟ್ಟದ ಒಕ್ಕೂಟದ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡುವಂತೆ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅದರಂತೆ ಬಳ್ಳಾರಿ ನಗರದ ಎಸ್.ಪಿ ವೃತ್ತದ ಬಳಿ ಖಾಲಿ ಇರುವ ತಾಲ್ಲೂಕು ಪಂಚಾಯಿತಿ ಮಳಿಗೆಯಲ್ಲಿ ಬಳ್ಳಾರಿ ತಾಲ್ಲೂಕು ಸಂಗನಕಲ್ಲು ಗ್ರಾಮ ಪಂಚಾಯತ್‍ನ ಅರುಣೋದಯ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದಡಿ ನೊಂದಾಯಿಸಿಕೊಂಡಿರುವ ದೇವಿಕಾ ಸ್ವ-ಸಹಾಯ ಗುಂಪಿನ ಸದಸ್ಯರ ವತಿಯಿಂದ ಮಿನಿ ಸೂಪರ್ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ. ಶುಕ್ರವಾರದಂದು, ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕೆ.ವಿ ತ್ರಿಲೋಕ ಚಂದ್ರ ಅವರು ಮಳಿಗೆಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಜಿಪಂ ಯೋಜನಾ ನಿರ್ದೇಶಕ ಪ್ರಮೋದ್, ಬಳ್ಳಾರಿ ತಾಪಂ ಕಾರ್ಯನಿರ್ವಾಹಕ ಮಡಗಿನ ಬಸಪ್ಪ, ಸಂಡೂರು ತಾಪಂ ಕಾರ್ಯನಿರ್ವಾಹಕ ಷಡಕ್ಷರಯ್ಯ ಸೇರಿದಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಇತರರು ಉಪಸ್ಥಿತರಿದ್ದರು. ಸುಮಾರು 60 ಮಹಿಳಾ ಉದ್ದಿಮೆಗಳಿಂದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗಣ್ಯರು ಉದ್ಘಾಟನೆ ನೆರವೇರಿಸಿ ಆಶಯನುದಡಿಯೊಂದಿಗೆ ಮಹಿಳಾ ಕಿರು ಉದ್ದಿಮೆದಾರರೊಂದಿಗೆ ಚರ್ಚಿಸಿ ಶುಭ ಆರೈಸಿದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ