ಗುರುವಾರ, ಅಕ್ಟೋಬರ್ 12, 2023

ವಿಭಾಗ ಮಟ್ಟದ ನಾಟಕ ಸ್ಪರ್ಧೆ

ಬಳ್ಳಾರಿ,ಅ.12(ಕರ್ನಾಟಕ ವಾರ್ತೆ): ಮಕ್ಕಳಲ್ಲಿ ರಂಗಭೂಮಿ ಮೂಲಕ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ “ಮನುಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ವಿಷಯದಡಿ 2023-24ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಇಂದು ನಗರದ ಕೋಟೆ ಪ್ರದೇಶದ ಸಂತ ಜಾನರ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಉರ್ದು ಮತ್ತು ಇತರೆ ಅಲ್ಪಾ ಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಗುರುವಾರದಂದು ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಜರುಗಿತು. ಈ ವಿಭಾಗ ಮಟ್ಟದಲ್ಲಿ ಒಟ್ಟು 7ಶೈಕ್ಷಣಿಕ ಜಿಲ್ಲೆಗಳ ಶಾಲಾ ಮಕ್ಕಳ ತಂಡಗಳು ಭಾಗವಹಿಸಿದ್ದವು. ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ವಿಜಯನಗರ, ಹಾವೇರಿ, ದಾವಣಗೆರೆ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಿಂದ ಭಾಗವಹಿಸಿದ ಮಕ್ಕಳು ಮಾನವ ಕುಲಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ಮುಖ್ಯ ವಿಷಯದಡಿಯಲ್ಲಿ ಆಹಾರ ಭದ್ರತೆ, ನಿತ್ಯ ಜೀವನದಲ್ಲಿ ಆಧುನಿಕ ತಂತ್ರಜ್ಞಾನ, ಆರೋಗ್ಯ ರಕ್ಷಣೆಯಲ್ಲಿ ಪ್ರಸ್ತುತ ಪ್ರಗತಿಗಳು ಮತ್ತು ಆಹಾರವಾಗಿ ಸಿರಿಧಾನ್ಯಗಳು ಎಂಬ ವಿಷಯದಡಿಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ನಾಟಕಗಳನ್ನು ಪ್ರದರ್ಶಿಸಿದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅರಸಾಪುರ ಪ್ರೌಢಶಾಲೆಯಿಂದ ನಮ್ಮ ಆರೋಗ್ಯ, ಚಿತ್ರದುರ್ಗದ ತಂತ್ರಜ್ಞಾನದ ಮಾಯೆ, ದಾವಣಗೆರೆ ಜಿಲ್ಲೆಯ ಮಾವಿನಕಟ್ಟೆಯ ಅಮ್ಮ ತಾಯಿ, ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಸಿರಿ ಧಾನ್ಯಗಳೇ ಆರೋಗ್ಯದ ಐಸಿರಿ, ಕೊಪ್ಪಳದಿಂದ ಹಗೆವು ಎನ್ನುವ ನಾಟಕ ಪ್ರದರ್ಶನ ಕಂಡವು. ಎರಡನೇ ಬಹುಮಾನ ಪಡೆದ ಕೊಪ್ಪಳ ಜಿಲ್ಲೆಯ ಜಹಗೀರಗುಡುದೂರು ಶಾಲಾ ಮಕ್ಕಳು ಅಭಿನಯಿಸಿದ ಹಗೆವು ನಾಟಕ ಗ್ರಾಮೀಣ ಭಾಗದಲ್ಲಿ ಹಗೆವುಗಳನ್ನು ಹಿಂದೆ ನಿರ್ಮಾಣ ಮಾಡಿ ಗ್ರಾಮೀಣ ಜನರು ಆಹಾರವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ರೀತಿಯನ್ನು ಹಿಂದಿನ ಕಾಲದಲ್ಲಿಯೇ ಕಂಡುಕೊಂಡಿದ್ದರು. ಹಗೆವು ಆಧುನಿಕ ಹಗೆವುಗಳ ನಿರ್ಮಾಣ ಹಾಗೂ ಅನಿವಾರ್ಯತೆ ಕುರಿತು ಎಚ್ಚರಿಕೆಯನ್ನು ಮೂಡಿಸುವಲ್ಲಿ ಈ ನಾಟಕವು ಮನ ಮುಟ್ಟಿತು. ಇಂದಿನ ನಾಟಕೋತ್ಸವದಲ್ಲಿ ಪ್ರಥಮವಾಗಿ ದಾವಣಗೆರೆ ಜಿಲ್ಲೆಯ ಮಾವಿನಕಟ್ಟೆ ಸರ್ಕಾರಿ ಪ್ರೌಢಶಾಲೆ, ದ್ವಿತೀಯ-ಕೊಪ್ಪಳ ಜಿಲ್ಲೆಯ ಸರ್ಕಾರಿ ಜಹಗೀರ ಗುಡದೂರ ಪ್ರೌಢಶಾಲೆ, ತೃತೀಯ-ವಿಜಯನಗರ ಜಿಲ್ಲೆಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಹರಪನಹಳ್ಳಿ, ಶೈಕ್ಷಣಿಕ ಜಿಲ್ಲೆಗಳು ಕ್ರಮವಾಗಿ ಬಹುಮಾನ ಪಡೆದುಕೊಂಡವು. ಉತ್ತಮ ನಟ ಪ್ರಶಸ್ತಿ -ನಾಗರಾಜ(ಕೊಪ್ಪಳ) ಹಾಗೂ ಉತ್ತಮ ನಟಿ ಪ್ರಶಸ್ತಿಯನ್ನು-ರಮ್ಯ.ಎಂ(ದಾವಣಗೆರೆ) ಅವರು ಬಹುಮಾನ ಪಡೆದುಕೊಂಡರು. ರಂಗ ಶಿಕ್ಷಕ ಗುರುರಾಜ್.ಎಲ್: ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕು ಜಹಗೀರ ಗುಡದೂರ ಪ್ರೌಢಶಾಲೆಯಲ್ಲಿ ರಂಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗುರುರಾಜ್.ಎಲ್ ಅವರು ಕಳೆದ 15 ವರ್ಷಗಳಿಂದ ನಾಟಕ ಶಿಕ್ಷಕರಾಗಿ ಮಕ್ಕಳಲ್ಲಿ ಸಾಂಸ್ಕøತಿಕವಾಗಿ ಹೊಸ ಬೀಜವನ್ನು ಬಿತ್ತುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ರಂಗ ಶಿಕ್ಷಣ ಇಂದಿನ ಮಕ್ಕಳಿಗೆ ತುಂಬಾ ಅನಿವಾರ್ಯವಾಗಿದ್ದು, ವಿಭಾಗ ಮಟ್ಟದಲ್ಲಿ ಹಳ್ಳಿಯ ಮೂಲದ ಮಕ್ಕಳು ಅಭಿನಯಿಸಿದ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು ಸಂತಸವಾಗಿದೆ, ಇದರಿಂದ ಶಾಲಾ ಮಕ್ಕಳಲ್ಲಿ ಮಾತು, ಯೋಚನೆ ಸೇರಿದಂತೆ ಅವರು ಬದುಕು ನೋಡುವ ದೃಷ್ಟಿ ಬದಲಾಗುತ್ತದೆ ಎಂದು ಹೇಳಿದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ