ಶುಕ್ರವಾರ, ಅಕ್ಟೋಬರ್ 13, 2023

ಕ್ಷಯರೋಗ ನಿರ್ಮೂಲನೆಗಾಗಿ ನಿಕ್ಷಯ ಮಿತ್ರರಾಗಿ ಮುಂದೆ ಬನ್ನಿ: ಡಾ.ಇಂದ್ರಾಣಿ

ಬಳ್ಳಾರಿ,ಅ.13(ಕರ್ನಾಟಕ ವಾರ್ತೆ): ಆಯುಷ್ಮಾನ್ ಭವಃ ಯೋಜನೆಯಡಿ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಒಂದೇ ಸೂರಿನಡಿ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಬೆಂಬಲವಾಗಿ ಸಾರ್ವಜನಿಕರು ಮುಂದೆ ಬಂದು ರೋಗಿಗಳಿಗೆ ಶೀಘ್ರ ಗುಣಮುಖರಾಗಲು ನಿಕ್ಷಯ ಮಿತ್ರರಾಗಿ ಕೈಜೋಡಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಮನವಿ ಮಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬ್ರೂಸ್‍ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್ ಭವಃ ಅಭಿಯಾನದಡಿ ನಗರದ ಕೋಟೆ ಪ್ರದೇಶದ ಜೈನ್ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಎರಡು ವಾರಗಳಿಗಿಂತ ಹೆಚ್ಚು ದಿನ ಕೆಮ್ಮು ಇದ್ದಲ್ಲಿ ತಕ್ಷಣ ಪರೀಕ್ಷೆ ಮಾಡಿಸಲು ವಿನಂತಿಸಿದರು. ಶಿಬಿರದಲ್ಲಿ 10 ಜನ ಕ್ಷಯರೋಗಿಗಳಿಗೆ ತಲಾ 05 ಜನರಿಗೆ ಮುಂದಿನ 06 ತಿಂಗಳವರೆಗೆ ಪೌಷ್ಟಿಕ ಆಹಾರ ಒದಗಿಸಲು ಮುಂದೆ ಬಂದ 39ನೇ ವಾರ್ಡ್ ಮಹಾನಗರ ಪಾಲಿಕೆ ಸದಸ್ಯೆ ಶಶಿಕಲಾ ಜಗನ್ನಾಥ್ ಹಾಗೂ ರಾಜೇಶ್ ಬಗರೇಚಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ ಕುಮಾರಿ ಅವರು ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಬಿ-ಪಿಎಮ್‍ಜೆಎವೈ-ಆರ್‍ಕೆ ಕಾರ್ಡ್‍ಗಳ ಮೂಲಕ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷದವರೆಗೆ ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸುಸಜ್ಜಿತ ಸರ್ಕಾರಿ ಅಥವಾ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಕಾರ್ಡ್‍ಗಳನ್ನು ಪಡೆಯಲು ನಗರದಲ್ಲಿನ ಬಳ್ಳಾರಿ ಓನ್, ಕರ್ನಾಟಕ ಓನ್ ಸೇವಾ ಕೇಂದ್ರ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಾಮ್-ಒನ್ ಸೇವಾ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು. ಶಿಬಿರದಲ್ಲಿ 138 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. 06 ಮಂದಿ ರಕ್ತದೊತ್ತಡ, 03 ಜನ ಸಕ್ಕರೆ ಖಾಯಿಲೆ ಇರುವವರು ಪತ್ತೆಯಾದರು. ಶಿಬಿರದಲ್ಲಿ 55 ಆಭಾ ಕಾರ್ಡ್ ನೊಂದಣಿ, 09 ಜನರ ಕಣ್ಣಿನಪೆÇೀರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ತಜ್ಞವೈದ್ಯರಾದ ಡಾ.ದರ್ಶನ, ಡಾ.ಫರ್‍ಹೀನ್ ತಾಜ್, ಆರ್‍ಬಿಎಸ್‍ಕೆಯ ಡಾ.ಪ್ರಸನ್ನ ಸೇರಿದಂತೆ ಪಿಹೆಚ್‍ಸಿಓ, ಹೆಚ್‍ಐಓ, ಕ್ಷಯರೋಗ ವಿಭಾಗದ ಸಿಬ್ಬಂದಿಯವರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ