ಮಂಗಳವಾರ, ಅಕ್ಟೋಬರ್ 17, 2023

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ: ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಮಾಡಬೇಕು: ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝಬೇರಾ

ಬಳ್ಳಾರಿ,ಅ.17(ಕರ್ನಾಟಕ ವಾರ್ತೆ): ತಂಬಾಕು ನಿಯಂತ್ರಣಕ್ಕಾಗಿ ಪೆÇಲೀಸ್, ನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ತನಿಖಾ ದಾಳಿ ನಡೆಸಬೇಕು. ತಂಬಾಕು ನಿಯಂತ್ರಣಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಣಾಮಕಾರಿಯಾಗಿ ತಂಬಾಕು ನಿಯಂತ್ರಣ ಜಾರಿಗೆ ತರಬಹುದು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಬೇಕು ಹಾಗೂ ಬಸ್‍ಗಳ ಮೇಲೆ ಅಂಟಿಸಲಾಗಿರುವ ತಂಬಾಕು ಪ್ರಚೋದಕ ಜಾಹೀರಾತುಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕೋಟ್ಪಾ ಕಾಯ್ದೆಯ ಅನುಸಾರ ನಾಮಫಲಕ ಅಳವಡಿಸುವುದರ ಜೊತೆಗೆ ಧೂಮಪಾನ ಪ್ರದೇಶಗಳನ್ನು ಸ್ಥಾಪಿಸಬೇಕು ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಅಬಕಾರಿ ಇಲಾಖೆಯವರಿಗೆ ಸೂಚನೆ ನೀಡಿದರು. ಅಂಗಡಿ, ಹೋಟಲ್, ಬೇಕರಿ, ಲಾಡ್ಜ್, ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಇತರೇ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕೋಟ್ಪಾ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್-4 ಮತ್ತು ಸೆಕ್ಷನ್-6ಎ ನಾಮಫಲಕಗಳನ್ನು ಹಾಕಬೇಕು; ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು; ನಾಮಫಲಕ ಹಾಕದ ಅಂಗಡಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ಅವರು ಮಾತನಾಡಿ ಕೋಟ್ಪಾ-2003ರ ಕಾಯ್ದೆಯ ಸೆಕ್ಷನ್-4,5,6ಎ,6ಬಿ ಮತ್ತು 7ರ ಕಾನೂನಿನ ಬಗ್ಗೆ ಮತ್ತು ವಿಧಿಸುವ ದಂಡದ ಮೊತ್ತದ ಬಗ್ಗೆ, ಅಂಗಡಿಯವರು ಹಾಕಬೇಕಾದ ಬೋರ್ಡ್‍ಗಳ ಬಗ್ಗೆ ಮಾಹಿತಿ ನೀಡಿದರು. ಈ ಬಾರಿಯ ಜಿಲ್ಲೆಯ ತಂಬಾಕು ಮುಕ್ತ ಗ್ರಾಮಗಳು ಸಿರುಗುಪ್ಪ ತಾಲೂಕಿನ ‘ಹಳೇಕೋಟೆ’, ಸಂಡೂರು ತಾಲೂಕಿನ ‘ನಿಡಗುರ್ತಿ’, ಬಳ್ಳಾರಿ ತಾಲೂಕಿನ ‘ಯರ್ರಗುಡಿ’, ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮಗಳು ಎಂದು ಎಡಿಸಿ ಅವರು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ