ಸೋಮವಾರ, ಅಕ್ಟೋಬರ್ 16, 2023

ಆಯುಷ್ಮಾನ್ ಭವಃ ಅಭಿಯಾನ; ಉಚಿತ ಆರೋಗ್ಯ ತಪಾಸಣಾ ಶಿಬಿರ ಸದುಪಯೋಗ ಪಡೆದುಕೊಳ್ಳುವಂತೆ ಡಿಹೆಚ್‍ಒ ಡಾ.ರಮೇಶ್ ಬಾಬು ಮನವಿ

ಬಳ್ಳಾರಿ,ಅ.16(ಕರ್ನಾಟಕ ವಾರ್ತೆ): ಆಯುಷ್ಮಾನ್ ಭವಃ ಅಭಿಯಾನದಡಿ ಪ್ರತಿ ಮಂಗಳವಾರ ಜಿಲ್ಲೆಯ ಎಲ್ಲಾ 6 ಸಮುದಾಯ ಆರೋಗ್ಯ ಕೇಂದ್ರಗಳು, 29 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 9 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ನಮ್ಮ ಕ್ಲಿನಿಕ್‍ಗಳಲ್ಲಿ ಹಾಗೂ ಗ್ರಾಮೀಣ ಭಾಗದ 97 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್‍ಬಾಬು ವಿನಂತಿಸಿದ್ದಾರೆ. ಶಿಬಿರದಲ್ಲಿ ತಜ್ಞ ವೈದ್ಯರಿಂದ ಸಮುದಾಯ ಆರೋಗ್ಯ ಕೇಂದ್ರ ಮಟ್ಟದಲ್ಲಿ ಹಾಗೂ ಉಳಿದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳಿಂದ ತಪಾಸಣೆ ಮಾಡಲಾಗುವುದು, ಅಲ್ಲದೇ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸಕ್ಕರೆ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆಗಳನ್ನು ಹಾಗೂ ರಕ್ತಹೀನತೆಯ ತಪಾಸಣೆಯನ್ನು ಕೈಗೊಳ್ಳಲಾಗುವುದು ಹಾಗೂ 2 ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಇರುವವರಿಗೆ ಕಫ ಪರೀಕ್ಷೆ ಮಾಡಿಸುವುದು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದಾನಿಗಳಿಂದ ಪೌಷ್ಟಿಕ ಆಹಾರ ಕಿಟ್‍ಗಳನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಆಭಾ ಕಾರ್ಡ್ ಆಯುಷ್ಮಾನ್ ಭವ ಹೆಲ್ತ್ ಅಕೌಂಟ್ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಸೇವೆ ಪಡೆಯುವ, ಪಡೆದ ಮಾಹಿತಿಯನ್ನು ಡಿಜಿಟಲ್ ಆರೋಗ್ಯ ದಾಖಲಿಕರಣ ಅಕೌಂಟ್ ಮೂಲಕ ಸಂರಕ್ಷಿಸಲಾಗುತ್ತದೆ. ಒಮ್ಮೆ 05 ವರ್ಷ ಮೇಲ್ಪಟ್ಟ ವಯಸ್ಸಿನ ವ್ಯಕ್ತಿಯು ನೊಂದಣಿ ಮಾಡಿಸಿ ದೇಶದ ಯಾವುದೇ ಭಾಗದಲ್ಲಿ ಚಿಕಿತ್ಸೆಗೆ ತೆರಳಿದರೂ ಸಹ ಸದರಿ ವ್ಯಕ್ತಿಯ ಆರೋಗ್ಯದ ಮಾಹಿತಿ ಲಭ್ಯವಾಗುವುದು. ಇದರಿಂದ ಅನಗತ್ಯವಾಗಿ ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಎಲ್ಲ ಸರಕಾರಿ ಅಸ್ಪತ್ರೆಗಳಲ್ಲಿ ನೊಂದಣಿಯನ್ನು ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ. ಅಂಗಾಂಗ ದಾನ ನೊಂದಣಿಯನ್ನು ನಮ್ಮ ಮರಣಾನಂತರ ದೇಹವನ್ನು ವ್ಯರ್ಥಮಾಡುವ ಬದಲು ದೇಹದ ಪ್ರಮುಖ ಅಂಗಾಂಗಳಾದ ಕಣ್ಣು ದಾನಮಾಡಬಹುದು. ಒಂದು ವೇಳೆ ಮೆದುಳು ನಿಷ್ಕ್ರಿಯಗೊಂಡ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ ಹೃದಯ, ಕಿಡ್ನಿ, ಲಿವರ್, ಶ್ವಾಶಕೋಶ, ಸಣ್ಣಕರಳು, ಮೇದೋಜಿರಕ ಗ್ರಂಥಿ, ದಾನಮಾಡಬಹುದು. ಪ್ರಸ್ತುತ ಇದನ್ನು ಓಔಖಿಖಿಔ ದ ಅಡಿಯಲ್ಲಿ ಕ್ಯೂಆರ್ ಬಳಸಿ ದಾನಿಗಳ ಮೊಬೈಲ್ ಮೂಲಕ ಸ್ಥಳದಲ್ಲಿಯೇ ನೊಂದಣಿ ಮಾಡಿಸಬಹುದಾಗಿದೆ ಎಂದಿದ್ದಾರೆ. ಆದ್ದರಿಂದ ಆಯುಷ್ಮಾನ್ ಭವಃ ಅಭಿಯಾನದಡಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜರುಗುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಿಹೆಚ್‍ಒ ಅವರು ಮನವಿ ಮಾಡಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ