ಮಂಗಳವಾರ, ಅಕ್ಟೋಬರ್ 10, 2023

ಮಾನಸಿಕ ರೋಗ ನಿವಾರಣೆಗೆ ಆಪ್ತ ಸಮಾಲೋಚನೆ ಬಹುಮುಖ್ಯವಾದುದು: ನ್ಯಾ.ರಾಜೇಶ್ ಹೊಸಮನೆ

ಬಳ್ಳಾರಿ,ಅ.10(ಕರ್ನಾಟಕ ವಾರ್ತೆ): ಬಾಹ್ಯ ದೇಹದ ಗಾಯಗಳನ್ನು ಕಾಣಬಹುದು, ಆದರೆ ತೀವ್ರ ತರವಾದ ಆಲೋಚನೆಗಳಿಂದ ಮತ್ತು ಜೀವನದಲ್ಲಿ ಬರುವ ಒತ್ತಡಗಳಿಂದ ಮಾನಸಿಕ ಸ್ಥಿತಿ ಕಾಣಲು ಸಾಧ್ಯವಿಲ್ಲ, ಅಂತಹ ಮಾನಸಿಕ ಖಿನ್ನತೆ ಇರುವವರು ಬೇಗನೇ ಆಪ್ತ ಸಮಾಲೋಚನೆ ಒಳಪಟ್ಟು ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ವಕೀಲರ ಸಂಘ, ಯುವ ರೆಡ್‍ಕ್ರಾಸ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ “ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು” ಎಂಬ ಘೋಷವಾಕ್ಯದಡಿ ಮಂಗಳವಾರದಂದು ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅರಿವಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ 15-25 ವಯಸ್ಸಿನ ಅವಧಿಯಲ್ಲಿ ಗ್ರಾಮೀಣ-ಪಟ್ಟಣ, ಬಡವ-ಶ್ರೀಮಂತ, ಬುದ್ದಿವಂತ-ದಡ್ಡ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಮಾನಸಿಕ ಖಿನ್ನತೆ ಬರುತ್ತದೆ. ಇಂಥಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಎದೆಗುಂದದೇ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದರು. ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಯಾಮ, ವಾಯುವಿಹಾರ ಹಾಗೂ ಮನೋರಂಜನೆ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾನಸಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವಿರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ಮಾನಸಿಕ ಸಮಸ್ಯೆಗಳಿದ್ದರೂ, ಉಚಿತ ಸಹಾಯವಾಣಿ ಸಂಖ್ಯೆ 14416ಗೆ ಕರೆಮಾಡಿ ಸೂಕ್ತ ಮಾರ್ಗದರ್ಶನ ಹಾಗೂ ಆಪ್ತಸಮಾಲೋಚನೆ ಪಡೆಯಬಹುದು ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಪ್ರತಿ ತಿಂಗಳು ಮಂಗಳವಾರದಂದು ತಾಲೂಕಿನ ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರು ಮತ್ತು ತಂಡದವರಿಂದ ಉಚಿತ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಲಾಗುತ್ತದೆ ಮತ್ತು ರೋಗಿಗಳಿಗೆ ವಿಶೇಷ ಗುರುತಿನ ಚೀಟಿ ನೀಡಿ, ಮಾನಸಿಕ ವೇತನವೂ ನೀಡಲಾಗುತ್ತದೆ ಎಂದು ತಿಳಿಸಿದರು. ವಿಮ್ಸ್‍ನ ಮನೋರೋಗ ತಜ್ಞ ಡಾ.ಕೊಟ್ರೇಶ್.ಎಸ್ ಅವರು ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ಹಾಗೂ ಯುವಕರು ಅತಿಯಾಗಿ ಸಾಮಾಜಿಕ ಜಾಲತಾಣಗಳ ವೀಕ್ಷಣೆಯಿಂದ ಮುಕ್ತರಾಗಬೇಕು ಎಂದರು. ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆ ಅತಿಯಾಗಿದ್ದು, ಮಾನಸಿಕವಾಗಿ ಕಿರಿ ಕಿರಿಯಾಗಿ ಏಕಾಗ್ರತೆÀಗೆ ತೊಂದರೆಯಾಗುತ್ತದೆ. ಅಲ್ಲದೇ ಅತೀಯಾಗಿ ಬಳಸುವುದರಿಂದ ಮಾನಸಿಕ ಕಾಯಿಲೆಗೆ ಗುರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ ತಮ್ಮ ಗುರಿ ಸಾಧಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿಯ ಉಚಿತ ಸಹಾಯವಾಣಿ ಸಂಖ್ಯೆ 14416 “ಟೆಲಿ ಮನಸ್” ಎಂಬ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ(ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ರೆಡ್ಡಿ ಎಚ್.ಕೆ, ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕ ಸಂಯೋಜಕಿ ಡಾ.ಪಲ್ಲವಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್.ದಾಸಪ್ಪನವರ, ಶಾಂತ ಕುಮಾರ್, ಕೆ.ಪಿ ಕಾವ್ಯ, ರಂಜಿತ, ನಿರಂಜನ್, ರಮೇಶ್ ಬಾಬು ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಇತರರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ