ಸೋಮವಾರ, ಜನವರಿ 1, 2024

ಕರ್ನಾಟಕ ಶಿಲ್ಪಕಲೆ ಸಾಮ್ರಾಟ ಜಕಣಾಚಾರಿ: ಎಡಿಸಿ ಮೊಹಮ್ಮದ್ ಝುಬೇರಾ

ಬಳ್ಳಾರಿ,ಜ.01(ಕರ್ನಾಟಕ ವಾರ್ತೆ): ನಾಡಿನ ಐತಿಹಾಸಿಕ ವಾಸ್ತು ಶಿಲ್ಪ ಪರಂಪರೆಗೆ ಶಿಲ್ಪಗಳ ಕೊಡುಗೆ ಅಪಾರವಾದುದು. ಅಂತಹ ಅಪರೂಪದ ಕೊಡುಗೆಯನ್ನು ಕಲಾಕೌಶಲ್ಯ ಮೂಲಕ ನಾಡಿಗೆ ನೀಡಿ ಅಜರಾಮರನಾದವನು ಅಮರಶಿಲ್ಪಿ ಜಕಣಾಚಾರಿ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಗಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಮರ ಶಿಲ್ಪಿ ಜಕಣಾಚಾರಿ ಅವರ ಉತ್ತಮ ಜ್ಞಾನ ಮತ್ತು ಕಲಾತ್ಮಕ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಅಮರಶಿಲ್ಪಿ ಜಕಣಾಚಾರಿ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ, ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಎಂದು ತಿಳಿಸಿದರು. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ವಿಶ್ವನಾಥ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜಕಣಾಚಾರಿ ಅವರು ತುಮಕೂರಿನ ಕ್ರೀಡಾಪುರ ಎಂಬ ಹಳ್ಳಿಯಲ್ಲಿ ಜನಿಸಿದವರು. ಸೌಂದರ್ಯ ಮತ್ತು ಕಲಾ ಆರಾಧಕನಾಗಿದ್ದ ಜಕಣಾಚಾರಿ ವೈಯಕ್ತಿಕ ಬದುಕಿನಲ್ಲಿ ನಡೆದ ಘಟನೆಗಳಿಂದ ಬೇಸತ್ತು ಹೆಂಡತಿ ಮನೆ, ಊರನ್ನು ತೊರೆದು ಲೋಕಸಂಚಾರಿಯಾಗಿ ಅಲೆಯುತ್ತಿರುವಾಗ ರಾಮಾನುಜಾಚಾರ್ಯರು ಮಾರ್ಗದರ್ಶನ ದಿಂದ ತನ್ನ ವೃತ್ತಿಯಲ್ಲಿ ಏಕಾಗ್ರತೆನ್ನು ಸಾಧಿಸಿದವರು ಎಂದು ಹೇಳಿದರು. ಮಗನಾದ ಡಂಕಣಾಚರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡವರು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಬಿ.ಜಾನಕಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ, ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಬಸವರಾಜ್, ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಮಿಷನ್‍ಚಂದ್ರ್ ಸೇರಿದಂತೆ ಸಮಾಜದ ಮುಖಂಡರುಗಳು ಹಾಗೂ ಇತರರು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ