ಸೋಮವಾರ, ಜನವರಿ 29, 2024

30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿಯಮಿತ ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿ: ಡಾ.ವೈ.ರಮೇಶ ಬಾಬು

ಜೀವನ ಶೈಲಿಯ ಖಾಯಿಲೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಅದರಲ್ಲೂ 30 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆ ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳನ್ನು ಆಯುಷ್ಮಾನ್ ಭವಃ ಮೇಳಗಳಲ್ಲಿ ಉಚಿತವಾಗಿ ಲಭಿಸುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ ಬಾಬು ವಿನಂತಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಆಯುಷ್ಮಾನ್ ಭವಃ ಮೇಳವು ಪ್ರತಿ ಮಂಗಳವಾರ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜರುಗುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರಿಗೆ ಶಿಬಿರಗಳಲ್ಲಿ ಸ್ಥನ ಕ್ಯಾನ್ಸರ್ ಪರೀಕ್ಷೆ ಹಾಗೂ ಗರ್ಭಕಂಠದ ಕ್ಯಾನ್ಸರ್‍ನ ಶಂಕೀತ ಪ್ರಕರಣಗಳಲ್ಲಿ ಮೇಲ್ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲು ಸೂಚಿಸಲಾಗುವುದು ಎಂದಿದ್ದಾರೆ. ಹೆಣ್ಣು ಭ್ರೂಣಲಿಂಗ ಪತ್ತೆ ಅಪರಾಧಕ್ಕೆ ಜೈಲು ಶಿಕ್ಷೆ: ಹೆಣ್ಣು ಭ್ರೂಣಲಿಂಗ ಕುರಿತು ಮಾಹಿತಿ ನೀಡುವ ವೈದ್ಯರು, ಮಾಹಿತಿ ಕೇಳುವ ಗರ್ಭಿಣಿಯ ಸಂಬಂಧಿಕರುಗಳಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಯ ಆರೋಗ್ಯ ಕರ್ನಾಟಕ ಯೋಜನೆ: ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ 5 ಲಕ್ಷದವರೆಗೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವನ್ನು ಸುಸಜ್ಜಿತ ಆಸ್ಪತ್ರೆಗಳಲ್ಲಿ ಒದಗಿಸಲು ಆಯುಷ್ಮಾನ್ ಭವ- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಮುಖ್ಯಮಂತ್ರಿಯ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡುಗಳನ್ನು ಡಿಜಿಟಲ್ ಹೆಲ್ತ್ ನಂಬರ್‍ನೊಂದಿಗೆ ಸ್ಥಳದಲ್ಲಿಯೇ ಮೊಬೈಲ್ ಮೂಲಕ ಮಾಡಿಕೊಡಲಾಗುವುದು. ಜೊತೆಗೆ ಪ್ರತಿದಿನ ಮನೆ ಬೇಟಿ ಮೂಲಕ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಡ್ ಮಾಡಿಕೊಡುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಕ್ಷಯರೋಗ ಪರೀಕ್ಷೆ: ಎರಡುವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ಕ್ಷಯರೋಗ ಪರೀಕ್ಷೆ ಹಾಗೂ ರೋಗ ಲಕ್ಷಣಗಳು ಉಳ್ಳುವರ ಕಫ ಪರೀಕ್ಷೆಯನ್ನು ಕೈಗೊಳ್ಳಲಾಗುವುದು ಮತ್ತು ಇತರ ಸಾಮಾನ್ಯ ಆರೋಗ್ಯ ಸೇವೆಗಳನ್ನು ಸಹ ಕೈಗೊಳ್ಳಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವಂತಹ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್‍ಗೆ, ಕಳಿಸಿಕೊಡಲಾಗುವುದು. ಸಾರ್ವಜನಿಕರು ತಮ್ಮ ಆಧಾರ ಕಾರ್ಡ್, ಮೊಬೈಲ್ ಹಾಗೂ ಈ ಹಿಂದೆ ಅಸ್ಪತ್ರೆಗೆ ತೋರಿಸಿದ ಚೀಟಿಗಳನ್ನು ತಂದು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಿದ್ದಾರೆ. ರಕ್ತದಾನ ಶಿಬಿರಗಳು: ಆಯುಷ್ಮಾನ್ ಮೇಳಗಳಲ್ಲಿ ಗ್ರಾಮಸ್ಥರು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗ್ರಾಮಪಂಚಾಯತ ಮಟ್ಟದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. ಅಂಗಾಂಗ ದಾನ ನೋಂದಣಿ: ಈಗಾಗಲೇ 3990 ಅಂಗಾಂಗ ದಾನ ನೋಂದಣಿಯನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿ ಮುಂಚುಣಿಯಲ್ಲಿದ್ದು ಜನ ಜಾಗೃತಿಯೊಂದಿಗೆ ನೋಂದಣಿಯನ್ನು ಸಹ ಮಾಡಲಾಗುವುದು. ಶಿಬಿರದಲ್ಲಿ ಕುಟುಂಬ ಕಲ್ಯಾಣ ವಿಧಾನಗಳು, ತಾಯಿ ಮಗುವಿನ ಆರೈಕೆ, ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ 14416, ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಮಾಹಿತಿ ನೀಡಲಾಗುವುದು. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ