ಶುಕ್ರವಾರ, ಜನವರಿ 26, 2024

ಸಂವಿಧಾನದ ಮೌಲ್ಯಗಳ ರಕ್ಷಣೆಗೆ ಕರೆ: ಪ್ರೊ.ಡಾ.ಅನಂತ್ ಎಲ್.ಝಂಡೇಕರ್

ಬಳ್ಳಾರಿ,ಜ.26(ಕರ್ನಾಟಕ ವಾರ್ತೆ): ಸಂವಿಧಾನದ ಮೌಲ್ಯಗಳು ಇಂದು ಸ್ವಾರ್ಥ ಸಾಧನೆಗೆ ಸಿಲುಕಿ ನಲುಗಿ ಹೋಗಿವೆ. ಇವುಗಳಿಂದ ಹೊರಬಂದು ಸದೃಢ ದೇಶ ನಿರ್ಮಾಣ ಮಾಡಲು ಎಲ್ಲರೂ ಮುಂದಾಗೋಣ ಎಂದು ಕುಲಪತಿ ಪ್ರೊ.ಡಾ.ಅನಂತ್ ಎಲ್.ಝಂಡೇಕರ್ ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಜರುಗಿದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಮಯಪ್ರಜ್ಞೆ ಹೊರತು ಸಮಾಜದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿಶ್ವದಲ್ಲೇ ಶ್ರೇಷ್ಠವಾದ ನಮ್ಮ ಸಂವಿಧಾನವು ಸ್ವಾರ್ಥಕ್ಕೆ ಸಿಲುಕಿ ಹಲವಾರು ಬಾರಿ ತಿದ್ದುಪಡಿಗೊಂಡು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ್ ಓಲೇಕಾರ್ ಅವರು ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಹೊಂದಿರುವುದು ನಮ್ಮ ಸಂವಿಧಾನ. ಜೀವನೋಪಾಯ ಮಾರ್ಗಗಳು ಸಂವಿಧಾನದ ಮೂಲ ಮೌಲ್ಯಗಳು. ಯುವಕರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಂಡು ಕಷ್ಟಪಟ್ಟು ಶಿಕ್ಷಣ ಪೂರೈಸಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು. ವಿತ್ತಾಧಿಕಾರಿಗಳಾದ ಪ್ರೊ.ಸದ್ಯೋಜಾತಪ್ಪ ಮಾತನಾಡಿ, ಶೇ.66 ಯುವಕರನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಇಂದು ವಿಪರೀತ ಮೊಬೈಲ್ ಬಳಕೆಯಿಂದ ತಮ್ಮ ಗುರಿ ಸಾಧನೆಗೆ ಒತ್ತು ನೀಡುವುದನ್ನು ಮರೆಯುತ್ತಿದ್ದಾರೆ. ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ ಇದರ ರೂವಾರಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಇಂದು ನಾವೆಲ್ಲ ನೆನೆಯುವುದು ಮುಖ್ಯವಾಗಿದೆ. ಸಮಾಜದಲ್ಲಿ ಎಲ್ಲರಿಗೂ ದೇಶಭಕ್ತಿ ಎಂಬುದು ಸಹಜವಾಗಿ ಬರಬೇಕು ಎಂದು ಕಿವಿಮಾತು ಹೇಳಿದರು. ಧ್ವಜಾರೋಹಣದ ನಂತರ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ಕ್ರೀಡಾ ನಿರ್ದೇಶಕ ಡಾ.ಸಂಪತ್ ಕುಮಾರ್, ಡಾ.ಶಶಿಧರ್, ರಾಹುಲ್ ಸೇರಿದಂತೆ ಎಲ್ಲ ನಿಕಾಯಗಳ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಸಂಯೋಜಕರುಗಳು, ಘಟಕಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ