ಗುರುವಾರ, ಜನವರಿ 18, 2024

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ಸಂಕಲನ ತರಬೇತಿ ಕಾರ್ಯಾಗಾರ

ಬಳ್ಳಾರಿ,ಜ,18,(ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಡಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ಹಾಗೂ ಕ್ಷೇತ್ರ ಕಾರ್ಯಾಚರಣೆ ವಿಭಾಗ ಬಳ್ಳಾರಿ ಇವರ ವತಿಯಿಂದ ಸ್ವಯಂ ಸಂಕಲನ ಮತ್ತು 2022-23ನೇ ಸಾಲಿನ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯ ರಿಟರ್ನ್ ಫೈಲಿಂಗ್‍ನ ಸಮಯೋಚಿತ ಸಲ್ಲಿಕೆಗಾಗಿ ವಿಭಾಗೀಯ ಕಚೇರಿಯಲ್ಲಿ ಐದು ಜಿಲ್ಲೆಗಳ ಕೈಗಾರಿಕೆಗಳ ಮಾಲೀಕರು, ವ್ಯವಸ್ಥಾಪಕರು ಮತ್ತು ಲೆಕ್ಕಿಗರಿಗೆ ಗುರುವಾರದಂದು ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ ಸಂಕಲನ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರವನ್ನು ಹುಬ್ಬಳ್ಳಿಯ ಕೇಂದ್ರೀಯ ಅಂಕಿಅಂಶ ಇಲಾಖೆಯ ಜಂಟಿ ನಿರ್ದೇಶಕರಾದ ಸುಗಂಧಾ ಶ್ರೀವಾಸ್ತವ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯು ಒಂದು ಶಾಸನಬದ್ಧ ಸಮೀಕ್ಷೆಯಾಗಿದೆ. ಜಿಡಿಪಿಯ ಲೆಕ್ಕಾಚಾರಕ್ಕಾಗಿ ಭಾರತ ಸರ್ಕಾರವು ಪ್ರತಿ ವರ್ಷ ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆಯನ್ನು ನಡೆಸುತ್ತದೆ. ಅಂಕಿಅಂಶಗಳ ಸಂಗ್ರಹಣೆ ಕಾಯ್ದೆ, 1953 ರ ಶಾಸನಬದ್ಧ ನಿಬಂಧನೆಗಳ ಅಡಿಯಲ್ಲಿ ವಾರ್ಷಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಆದ್ದರಿಂದ ಕೈಗಾರಿಕೆಗಳು ಮತ್ತು ಉದ್ಯಮಿಗಳು ಸೂಚನೆಯ ಸ್ವೀಕೃತಿಯ ನಂತರ ನಿಗದಿತ ಅವಧಿಯೊಳಗೆ ರಿಟರ್ನ್‍ಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. ಕೈಗಾರಿಕಾ ವಾರ್ಷಿಕ ಸಮೀಕ್ಷೆಯು ಭಾರತದಲ್ಲಿ ಕೈಗಾರಿಕಾ ಅಂಕಿಅಂಶಗಳ ಪ್ರಮುಖ ಮೂಲವಾಗಿದೆ. ಉತ್ಪಾದನಾ ಪ್ರಕ್ರಿಯೆಗಳು, ದುರಸ್ತಿ ಸೇವೆಗಳು, ಅನಿಲ ಮತ್ತು ನೀರು ಸರಬರಾಜು ಮತ್ತು ಶೀತಲ ಶೇಖರಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಒಳಗೊಂಡಿರುವ ಸಂಘಟಿತ ಉತ್ಪಾದನಾ ವಲಯದ ಬೆಳವಣಿಗೆ, ಸಂಯೋಜನೆ ಮತ್ತು ರಚನೆಯಲ್ಲಿನ ಬದಲಾವಣೆಗಳನ್ನು ವಸ್ತುನಿಷ್ಠವಾಗಿ ಮತ್ತು ವಾಸ್ತವಿಕವಾಗಿ ನಿರ್ಣಯಿಸಲು ಮತ್ತು ಮೌಲ್ಯಮಾಪನ ಮಾಡಲು ಈ ಅಂಕಿಅಂಶಗಳ ಮಾಹಿತಿಯನ್ನು ಒದಗಿಸುತ್ತದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ 10ಕ್ಕೂ ಹೆಚ್ಚು ಕಾರ್ಖಾನೆಗಳ ಮಾಲಿಕರು, ವ್ಯವಸ್ಥಾಪಕರು, ಮತ್ತು ಲೆಕ್ಕಿಗರು ಪಾಲ್ಗೊಂಡಿದ್ದರು. ದತ್ತಾಂಶದ ಸ್ವಯಂ ಸಂಕಲನದ ತರಬೇತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ಉಸ್ತುವಾರಿ ಹಾಗೂ ಹಿರಿಯ ಅಂಕಿಅಂಶ ಅಧಿಕಾರಿ ಮನೀಶ್ ಕುಮಾರ್, ಸಹಾಯಕ ನಿರ್ದೇಶಕ ಜೆ.ಪಿ.ನಾರಾಯಣ್, ಉಪಕ್ಷೇತ್ರಿಯ ಕಾರ್ಯಾಲಯದ ಉಸ್ತುವಾರಿ ಅಧಿಕಾರಿಗಳು ಹಾಗು ಇತರೆ ಹಿರಿಯ ಸಂಖ್ಯಾಶಾಸ್ತ್ರೀಯ ಅಧಿಕಾರಿಗಳು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ