ಸೋಮವಾರ, ಜನವರಿ 29, 2024

ಫೆ.02 ರಂದು ಜಿಲ್ಲೆಯಲ್ಲಿ ಟೆಲಿ ಐಸಿಯು ಹಬ್ ಆರಂಭ; ವೈದ್ಯರಿಗೆ ಮೂರು ದಿನಗಳ ತರಬೇತಿ ತುರ್ತು ಚಿಕಿತ್ಸೆಗೆ ಆರೈಕೆ ಮಾಡಲು ಟೆಲಿ ಐಸಿಯು ಹಬ್ ಸಹಕಾರಿ: ಡಾ.ಕೃಷ್ಣ

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಗ್ರಾಮ ಮತ್ತು ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ತಜ್ಞ ವೈದ್ಯಕೀಯ ಸಲಹೆ ನೀಡಲು ಟೆಲಿ ಐಸಿಯು ಹಬ್ ಸಹಾಯವಾಗಲಿದೆ ಎಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ.ಕೃಷ್ಣ ಅವರು ಹೇಳಿದರು. ನಗರದ ಜಿಲ್ಲಾ ಆಸ್ಪತ್ರೆಯ ಡಿಎನ್‍ಬಿ ಸಭಾಂಗಣದಲ್ಲಿ ಸೋಮವಾರದಿಂದ ಹಮ್ಮಿಕೊಂಡಿದ್ದ ಟೆಲಿ ಐಸಿಯು ಹಬ್‍ನ ಮೂರು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಟೆಲಿ ಐಸಿಯು ಹಬ್ ಮೂಲಕ ಗ್ರಾಮ ಮತ್ತು ತಾಲ್ಲೂಕುಗಳ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಮತ್ತು ಆರೈಕೆ ಮಾಡಲು ಇದು ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಟೆಲಿ ಐಸಿಯು ಹಬ್‍ಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಫೆ.02 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೊದಲ ಭಾಗವಾಗಿ ಜಿಲ್ಲಾ ಆಸ್ಪತ್ರೆಯಿಂದ ಸಂಡೂರು ಮತ್ತು ಸಿರುಗುಪ್ಪ ತಾಲ್ಲೂಕುಗಳನ್ನು ಆಯ್ಕೆ ಮಾಡಲಾಗಿದ್ದು, ಇದರ ಪೂರ್ವಭಾವಿಯಾಗಿ ಎರಡು ತಾಲ್ಲೂಕಿನ ವೈದ್ಯರು, ಶುಶೂಷ್ರಕರು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಟೆಲಿ ಐಸಿಯು ಹಬ್ ಸೌಲಭ್ಯದ ಮೂಲಕ ವೈದ್ಯರು ರೋಗಿಗಳ ಆರೋಗ್ಯದ ನಿಯತಾಂಕಗಳ ಬಗ್ಗೆ ಆಸ್ಪತ್ರೆಗಳಿಂದ ವಿವರಗಳನ್ನು ಪಡೆದು ಅವರಿಗೆ ನೀಡಬೇಕಾದ ಚಿಕಿತ್ಸೆಯ ಬಗ್ಗೆ ಸಲಹೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಟೆಲಿ ಐಸಿಯು ಹಬ್ ಮೂಲಕ ವೈದ್ಯರು ರೋಗಿಗಳೊಂದಿಗೆ ನೇರವಾಗಿ ಆಡಿಯೋ ಮೂಲಕ ಮಾತನಾಡಿ, ಅಗತ್ಯ ಚಿಕಿತ್ಸೆ ನೀಡುತ್ತಾರೆ. ಇದು ಸ್ವಯಂಚಾಲಿತವಾಗಿ ನಗರದ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆಯನ್ನೂ ಕಡಿಮೆ ಮಾಡುತ್ತದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಟೆಲಿ ಐಸಿಯು ಹಬ್‍ನ ನೋಡೆಲ್ ಅಧಿಕಾರಿ ಡಾ.ದಿನೇಶ್, ಟೆಲಿ-ಐಸಿಯು ಹಬ್ ಒಂದು ರಿಮೋಟ್ ಸೈಟ್ ಆಗಿದ್ದು, ಅದು ತೀವ್ರವಾಗಿ ಅಸ್ವಸ್ಥರಾಗಿರುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಒಂದು ನುರಿತ ವೈದ್ಯತಂಡವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ಹಬ್‍ನಲ್ಲಿ ಸಂವಹನತೆಯಿಂದ ಕೂಡಿದ ತಾಂತ್ರಿಕ ಸಾಫ್ಟ್‍ವೇರ್ ಮತ್ತು ಪರವಾನಿಗೆಗಳು, ನೆಟ್‍ವರ್ಕಿಂಗ್ ಸಲಕರಣೆಗಳಿಂದ ಕೂಡಿ ಟೆಲಿ ಐಸಿಯು ಹಬ್ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು. ತರಬೇತಿಯಲ್ಲಿ ವೈದ್ಯಕೀಯ ಸಲಹೆ ಮತ್ತು ಸಮಾಲೋಚನೆಗಾಗಿ ಕೃತಕ ಬುದ್ಧಿಮತ್ತೆ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಪ್ರಾತ್ಯಕ್ಷಿಕೆ ತೋರಿಸಿದರು. ಈ ಸಂದರ್ಭದಲ್ಲಿ ವಿಜಯನಗರ ವೈದ್ಯಕೀಯ ಸಂಸ್ಥೆಯ ಪ್ರಾಚಾರ್ಯರಾದ ಡಾ.ಕೃಷ್ಣಸ್ವಾಮಿ, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ವಿಶ್ವನಾಥ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಅರವಳಿಕೆ ತಜ್ಞ ಡಾ.ಬಾಲ ಭಾಸ್ಕರ್ ರಾವ್, ಜಿಲ್ಲಾ ಆಸ್ಪತ್ರೆಯ ನೋಡೆಲ್ ಅಧಿಕಾರಿಗಳಾದ ಡಾ.ವಿಮಲಾ, ಡಾ.ಜೋಶ್ನಾ ಸೇರಿದಂತೆ ಸಂಡೂರು ಮತ್ತು ಸಿರುಗುಪ್ಪ ತಾಲ್ಲೂಕು ವೈದ್ಯರು, ಶುಶೂಷ್ರಕರು, ಸಿಬ್ಬಂದಿಗಳು ಹಾಗೂ ಇನ್ನೀತರರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ