ಭಾನುವಾರ, ಜನವರಿ 14, 2024

ಹಬ್ಬಗಳ ಹಿನ್ನಲೆ: ವಾಹನಗಳ ಸಂಚಾರ ನಿರ್ಬಂಧಿಸಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ

ಬಳ್ಳಾರಿ,ಜ.14(ಕರ್ನಾಟಕ ವಾರ್ತೆ):
ನಗರದ "ಹಳೇ ಬೆಂಗಳೂರು ರಸ್ತೆ (ರಾಯಲ್ ಸರ್ಕಲ್‌ನಿಂದ ಎಪಿಎಂಸಿ ಸರ್ಕಲ್‌ವರೆಗೆ) ಮತ್ತು ಮೋತಿ ವೃತ್ತದಿಂದ ಕಣೆಕಲ್ ಬಸ್ ನಿಲ್ದಾಣದವರೆಗಿನ" ರಸ್ತೆಗಳಲ್ಲಿ ಹಬ್ಬಗಳ ದಿನ ಹಾಗೂ ಹಬ್ಬದ ಹಿಂದಿನ ದಿನದಂದು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಬೆಳಿಗ್ಗೆ 07 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ತೆಯನ್ನು ಕಲ್ಪಿಸುವ ಹಿತದೃಷ್ಟಿಯಿಂದ ಮೋಟರ್ ವಾಹನ ಕಾಯ್ದೆ 1988 ಕಲಂ 115 ರಡಿಯಲ್ಲಿ ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮ 1989 ನಿಯಮ 221A(5) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ. *ಯಾವ್ಯಾವ ದಿನಗಳಂದು ವಾಹನಗಳ ನಿರ್ಬಂಧ:* ಸಂಕ್ರಾಂತಿ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ, ಶಿವರಾತ್ರಿ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ, ಯುಗಾದಿ ಹಬ್ಬ ಮತ್ತು ಅದರ ಹಿಂದಿನ ದಿನ, ರಂಜಾನ್ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ, ಹನುಮ ಜಯಂತಿ ದಿನ ಮತ್ತು ಅದರ ಹಿಂದಿನ ದಿನ, ಮೊಹರಂ ಹಬ್ಬದ ಕೊನೆಯ ದಿನ, ಗಣೇಶ ಚತುರ್ಥಿ ದಿನ ಮತ್ತು ಅದರ ಹಿಂದಿನ ದಿನ, ದಸರಾ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ, ದೀಪಾವಳಿ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ. ಈ ಮೇಲ್ಕಂಡ ಹಬ್ಬಗಳ ದಿನ ಹಾಗೂ ಹಬ್ಬದ ಹಿಂದಿನ ದಿನಗಳಂದು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ