ಸೋಮವಾರ, ಜನವರಿ 29, 2024

ಸಂವಿಧಾನದ ಜಾಗೃತಿ ಅನಿವಾರ್ಯ: ಡಾ.ಮೋಹನ್ ದಾಸ್

ಬಳ್ಳಾರಿ,ಜ.29(ಕರ್ನಾಟಕ ವಾರ್ತೆ): ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ನಂತರ ಸಂವಿಧಾನದ ನೈಜ ಆಶಯಗಳ ಕುರಿತು ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ನಮಗೆ ಎದುರಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೋಹನ್ ದಾಸ್.ಕೆ ಅವರು ಹೇಳಿದರು. ಸಮಾಜ ಕಲ್ಯಾಣ ಇಲಾಖೆ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಕಲ್ಯಾಣ ಘಟಕ ಇವರ ಸಂಯುಕ್ತಾಶ್ರಯದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ಜಾಗೃತಿ ಜಾಥ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಹೇಗೆ ಸುಲಭವಾಗಿ ಲಭಿಸಲಿಲ್ಲವೋ, ಸಂವಿಧಾನವೂ ಸುಲಭವಾಗಿ ಸಿಕ್ಕಿಲ್ಲ. ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾದ ಬಳಿಕ ಇಂಗ್ಲೇಂಡ್, ಫ್ರಾನ್ಸ್, ಐಲ್ರ್ಯಾಂಡ್, ಕೆನಡಾ, ರಷ್ಯಾ ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಸಂವಿಧಾನ ಅಧ್ಯಯನ ಮಾಡಿ 141 ದಿನಗಳಲ್ಲಿ ಕರಡು ಸಮಿತಿಗೆ ಕರಡು ಪ್ರತಿಯನ್ನು ಸಲ್ಲಿಸುತ್ತಾರೆ. ಎರಡು ವರ್ಷ 11 ತಿಂಗಳ 18 ದಿನಗಳ, 20 ಸಾವಿರ ಪುಟಗಳ ಕರಡು ಪ್ರತಿಯಲ್ಲಿರುವ ಅಂಶಗಳನ್ನು ಚರ್ಚೆಗೆ ಒಳಪಡಿಸಿದ ಬಳಿಕ ಸಮಾನತೆ, ಸಮಬಾಳು ಮತ್ತು ಸಮಪಾಲಿನ ಆಧಾರದ ಮೇಲೆ ರಚಿಸಲಾಗಿರುವ ಕರಡು ಸಂವಿಧಾನವಾಗಿ ಅಂಗೀಕರಿಸಲಾಯಿತು ಎಂದು ಸಂವಿಧಾನ ರಚನೆಯ ಕುರಿತು ವಿವರಿಸಿದರು. ಸಂವಿಧಾನವು ಪೂಜ್ಯನೀಯ ಗ್ರಂಥವಾಗಿದ್ದು, ಸಂವಿಧಾನದ ಮಹತ್ವ ಹಾಗೂ ಮೌಲ್ಯದ ಕುರಿತು ಅರಿವು ಮೂಡಿಸುವುದು ಇಂದು ಅನಿವಾರ್ಯವಾಗಿದೆ. ನಮ್ಮ ದೇಶವು ಇಂದು ಯಾವುದೇ ಧರ್ಮಗ್ರಂಥಗಳ ತತ್ವದ ಮೇಲೆ ನಡೆಯುತ್ತಿಲ್ಲ. ಬದಲಿಗೆ ಸಂವಿಧಾನದ ಆಶಯಗಳ ಮೇಲೆ ನಡೆಯುತ್ತಿದೆ. ಅಂತಹ ಅದ್ಭುತವಾದ ಸಂವಿಧಾನ ನೀಡಿದ ಶ್ರೇಯಸ್ಸು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಮಾಧ್ಯಮಗಳು ಸಹ ಇಂದು ಸಂವಿಧಾನ ಸ್ಥಿತಿಗತಿಗಳ ಕುರಿತಾಗಿ ಎಚ್ಚರಿಸುತ್ತಿವೆ. ದೇಶದ ಜನತೆಗೆ ಸಂವಿಧಾನ ನೀಡಿರುವ ಹಕ್ಕುಗಳ ಅರಿವು ಮೂಡಿಸಲು ಸಂವಿಧಾನ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಸಮಯ ನಮಗೆ ಸರ್ಕಾರವು ಒದಗಿಸಿದೆ ಎಂದು ಹೇಳಿದರು. ವಿವಿಯ ಕುಲಸಚಿವರಾದ ರುದ್ರೇಶ.ಎಸ್.ಎನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸಂವಿಧಾನವು ನಮ್ಮ ಧರ್ಮಗ್ರಂಥವಿದ್ದಂತೆ, ಅದನ್ನು ಪವಿತ್ರವಾಗಿ ಕಾಣಬೇಕು. ಸಂವಿಧಾನದ ಚೌಕಟ್ಟಿನಡಿ ಎಲ್ಲರೂ ಸಮಾನರು ಎಂಬ ತತ್ವ ಸಾರಿದವರು ಡಾ. ಅಂಬೇಡ್ಕರ್ ಅವರು. ಸಂವಿಧಾನದ 14 ರಿಂದ 19 ಆರ್ಟಿಕಲ್‍ಗಳು ನಮ್ಮ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಸಾಮಾನ್ಯ ಪ್ರಜೆಯಾದ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಲು ಸಂವಿಧಾನವೇ ಕಾರಣ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ.ಅನಂತ ಎಲ್ ಝಂಡೇಕರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ಮನುಷ್ಯನ ಜ್ಞಾನ, ಸಮಾನತೆ, ಸ್ವಾತಂತ್ರ ಮತ್ತು ನ್ಯಾಯಾಂಗವನ್ನು ಒಳಗೊಂಡಿದೆ. ಸಂವಿಧಾನ ಮಹಿಳೆಯರಿಗೆ ಹಲವಾರು ಸ್ಥಾನಮಾನಗಳನ್ನು ನೀಡಿದೆ. ಸರ್ಕಾರದ ಈ ಸಂವಿಧಾನದ ಅರಿವು ಮೂಡಿಸುವ ಕಾರ್ಯವು ಶ್ಲಾಘನೀಯವಾಗಿದೆ ಎಂದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸತೀಶ್ ಕೆ.ಹೆಚ್ ಅವರು, ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸಾಮೂಹಿಕವಾಗಿ ಬೋಧಿಸಿದರು. ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರದ ಮೆರವಣಿಗೆಯನ್ನು ಡೊಳ್ಳು ಬಾರಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಸಂವಿಧಾನ ಪೀಠಿಕೆ ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತಾದ ಅಂಶಗಳನ್ನು ವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ರಮೇಶ ಓ ಓಲೇಕಾರ್, ಹಣಕಾಸು ಅಧಿಕಾರಿಗಳಾದ ಪ್ರೊ. ಸದ್ಯೋಜಾತಪ್ಪ, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಡಾ.ಶಶಿಕಾಂತ್ ಎಚ್ ಮಜಗಿ, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಕೆಲ್ಲೂರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ