ಸೋಮವಾರ, ಜನವರಿ 22, 2024
ಬಳ್ಳಾರಿ ಮಹಾನಗರ ಪಾಲಿಕೆ: ಉದ್ದಿಮೆಯ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಇಲ್ಲದಿದ್ದರೆ ಪರವಾನಿಗೆ ರದ್ದು
ಬಳ್ಳಾರಿ,ಜ.22(ಕರ್ನಾಟಕ ವಾರ್ತೆ):
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಉದ್ದಿಮೆದಾರರು ತಮ್ಮ ಉದ್ದಿಮೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು. ತಪ್ಪಿದಲ್ಲಿ ಉದ್ದಿಮೆಗಳ ಪರವಾನಿಗೆಗಳನ್ನು ರದ್ದುಪಡಿಸಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್‍ಸಾಬ್ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಕನ್ನಡ ಭಾಷೆಯನ್ನು ಶೇ.60 ರಷ್ಟು ಕಡ್ಡಾಯವಾಗಿ ಬಳಸದಿದ್ದರೆ ಉದ್ದಿಮೆ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ನಿರ್ಬಂಧ ವಿಧಿಸಲು ಸರ್ಕಾರ ಆದೇಶಿಸಿದೆ.
ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ನಾಮಫಲಕವು ಪ್ರಧಾನವಾಗಿ ಶೇ.60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರಬೇಕು. ನಾಮಫಲಕದಲ್ಲಿ ಅಶ್ಲೀಲ ಭಾಷೆ ಹಾಗೂ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ. ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ನಾಮಫಲಕ ದೊಡ್ಡದಾಗಿರುವಂತೆ ಅಳವಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಈ ಪ್ರಕಟಣೆಗೊಂಡ ದಿನದಿಂದ ಫೆ.15 ರೊಳಗಾಗಿ ಎಲ್ಲಾ ಉದ್ದಿಮೆ, ಅಂಗಡಿಗಳ ನಾಮಫಲಕಗಳು ಪ್ರಧಾನವಾಗಿ ಕನ್ನಡದಲ್ಲಿರಬೇಕು. ತಪ್ಪಿದಲ್ಲಿ ಅಂತಹ ಯಾವುದೇ ನಾಮಫಲಕಗಳು ಕಂಡುಬಂದಲ್ಲಿ ನಿಯಮಾನುಸಾರ ದಂಡವಿಧಿಸಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು ಹಾಗೂ ಉದ್ದಿಮೆಗಳ ಉದ್ದಿಮೆ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಎಂದು ಆಯುಕ್ತ ಜಿ.ಖಲೀಲ್‍ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ