ಮಂಗಳವಾರ, ಜನವರಿ 30, 2024

ಸಂವಿಧಾನ ಜಾಗೃತಿ ಜಾಥಾ: ಅದ್ದೂರಿ ಸ್ವಾಗತ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲು ಜಿಲ್ಲೆಯಲ್ಲಿ ನಡೆಯುತ್ತಿರುವ “ಸಂವಿಧಾನ ಜಾಗೃತಿ ಜಾಥಾ”ವು ಮಂಗಳವಾರದಂದು ಕೊಳಗಲ್ಲು, ಬಿ.ಬೆಳಗಲ್ಲು, ಹಲಕುಂದಿ, ಸಂಜೀವರಾಯನಕೋಟೆ, ವೈ.ಬೂದಿಹಾಳ್ ಹಾಗೂ ಶಂಕರಬಂಡೆ ಮಾರ್ಗವಾಗಿ ಸಂಚರಿಸಿ, ಸಂವಿಧಾನ ರಚನಾ ಸಭೆಯ ಕುರಿತ ವಿಡಿಯೋ ತುಣುಕುಗಳನ್ನು ಸಾರ್ವಜನಿರಿಗೆ ಪ್ರದರ್ಶಿಸಿ, ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು. ಇಂದು ಬೆಳಿಗ್ಗೆ ಕೊಳಗಲ್ಲು ಗ್ರಾಮದಲ್ಲಿ ಜಾಥಾವನ್ನು ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕಲಾವಿದರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಗ್ರಾಮದ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿದರು. ಕೊಳಗಲ್ಲು ಗ್ರಾಮದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಕೆ.ನಂದೀಶ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಬೋಧಿಸಿದ್ದು ವಿಶೇಷವಾಗಿತ್ತು. ಹಲಕುಂದಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೇಶವ ಅವರು ಮಾತನಾಡಿ, ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥಾವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಚರಿಸಿ ಜನ ಜಾಗೃತಿ ಮೂಡಿಸುತ್ತಿರುವುದು ತುಂಬಾ ಸಂತೋಷದಾಯಕವಾದ ವಿಚಾರವಾಗಿದೆ ಎಂದು ತಿಳಿಸಿದರು. ಸಂಜೀವರಾಯನಕೋಟೆಯಲ್ಲಿ ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಆರ್.ಶಿವನಗೌಡ ಮಾತನಾಡಿ, ಈ ಜನಜಾಗೃತಿ ಕಾರ್ಯಕ್ರಮವನ್ನು ಸರ್ಕಾರವು ಆಯೋಜಿಸಿದ್ದು, ಜನಸಾಮಾನ್ಯರಿಗೆ ಸಂವಿಧಾನದ ಬಗೆಗೆ ಅರಿಯಲು ಸಹಕಾರಿಯಾಗಿದೆ ಎಂದರು. ಜಾಥಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ