ಗುರುವಾರ, ಜನವರಿ 25, 2024

“ಪಿಂಕ್ ಲೈಟ್‍ನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಹೆಣ್ಣು-ಗಂಡಿನ ಅನುಪಾತ ಸಮಪ್ರಮಾಣವಾಗಿ ಕಾಪಾಡಲು ಪಣತೋಡೋಣ: ಡಿಹೆಚ್‍ಓ ಡಾ.ವೈ.ರಮೇಶ್ ಬಾಬು

ಬಳ್ಳಾರಿ,ಜ.25(ಕರ್ನಾಟಕ ವಾರ್ತೆ): ಹೆಣ್ಣು ಮಗುವನ್ನು ಉಳಿಸಿ ಬೆಳೆಸುವುದರ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಗಂಡು-ಹೆಣ್ಣಿನ ಅನುಪಾತವನ್ನು ಸಮಪ್ರಮಾಣದಲ್ಲಿ ಕಾಪಾಡುವ ಹೊಣೆ ನಮ್ಮೆಲರ ಮೇಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಟುಂಬ ಕಲ್ಯಾಣ ಅನುಷ್ಟಾನ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಕಟ್ಟಡಕ್ಕೆ ಗುಲಾಬಿ ವರ್ಣದ ದೀಪದಿಂದ ಅಲಂಕರಿಸುವ ಮೂಲಕ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿ ಬಳಿಕ ಮಾತಾನಾಡಿದ ಅವರು, ಹೆಣ್ಣು ಭ್ರೂಣಹತ್ಯೆಯಂತಹ ಸಮಾಜದ ಅನಿಷ್ಟ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಲು ಎಲ್ಲಾ ಹಂತದಲ್ಲಿ ಸಮುದಾಯ ಸಕ್ರಿಯವಾಗಿ ಭಾಗವಹಿಸಬೇಕು ಎಂದು ವಿನಂತಿಸಿದರು. ರಾಜ್ಯ ಸರ್ಕಾರವು ಹೆಣ್ಣು ಮಗುವಿನ ಉಳಿವಿಗಾಗಿ ಹೆಣ್ಣು ಭ್ರೂಣ ಲಿಂಗಪತ್ತೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಹಲವು ಕಾರ್ಯಚಟುವಟಿಕೆಗಳನ್ನು ರೂಪಿಸುತ್ತಿದೆ. ಭ್ರೂಣಲಿಂಗ ಪತ್ತೆ ನಿμÉೀಧ ಕಾಯ್ದೆ 1994 ರ ಸೆಕ್ಷನ್ 23ರ ಪ್ರಕಾರ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದರು. ಭ್ರೂಣಲಿಂಗ ಪತ್ತೆಗೆ ಗರ್ಭಿಣಿಗೆ ಒತ್ತಾಯಿಸಿದ್ದಲ್ಲಿ ಅಂತಹ ಸಂಬಂಧಿಕರನ್ನು 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷದ ವರೆಗೂ ದಂಡ ವಿಧಿಸುವ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಇದರಡಿಯಲ್ಲಿ ಹೆಣ್ಣುಭ್ರೂಣ ಪತ್ತೆ ಮಾಡುವವರಿಗೆ ಮತ್ತು ಕೇಳುವವರಿಗೆ ಸಹ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಹೆಚ್ಚು ಜನಜಾಗೃತಿ ನೀಡಬೇಕಿದೆ ಎಂದರು. ಸಮಾಜದ ಸ್ವಾಸ್ಥ್ಯ ಕಾಪಾಡಲು ಗಂಡು-ಹೆಣ್ಣು ನಾಣ್ಯದ ಎರಡು ಮುಖಗಳು ಇರುವಂತೆ ಕುಟುಂಬದ ಹೆಣ್ಣು ಮಗು ನೂರು ಗಂಡು ಮಕ್ಕಳಿಗೆ ಸಮವಾಗಿದ್ದಾಳೆ. ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆ ದೇಶಕ್ಕೆ ಮುಕುಟವಾಗುವಂತೆ ಸಾಧನೆಗಳನ್ನು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಹೆಣ್ಣು ಮಗುವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್.ಆರ್., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ್ ಸೇರಿದಂತೆ ಡಾ.ನರಸಿಂಹ ಮೂರ್ತಿ, ಡಾ.ಜಬೀನಾ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ಡಿಎನ್‍ಒ ಗಿರೀಶ್, ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗದ ಅರುಣ್ ಕುಮಾರ್, ಗೋಪಾಲ್ ಕೆ.ಹೆಚ್., ಡಿಪಿಎಮ್ ವೆಂಕೋಬ ನಾಯ್ಕ್, ರಾಘವೇಂದ್ರ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ