ಶನಿವಾರ, ಅಕ್ಟೋಬರ್ 7, 2023
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ ಸಾಲ-ಸೌಲಭ್ಯ: ಅರ್ಜಿ ಆಹ್ವಾನ
ಬಳ್ಳಾರಿ,ಅ.07(ಕರ್ನಾಟಕ ವಾರ್ತೆ):
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ನಿಗಮದಿಂದ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಪ್ರವರ್ಗ-1ರ 6(ಎ) ಯಿಂದ 6(ಎಕೆ)ವರೆಗೆ ಬರುವ ಬೆಸ್ತ, ಅಂಬಿಗ/ಅಂಬಿ, ಗಂಗಾಮತ, ಕಬ್ಬಲಿಗ, ಕೋಲಿ, ಮೊಗವೀರ ಮತ್ತು ಇದರ ಉಪ ಜಾತಿಗಳಿಗೆ ಒಳಪಡುವ ಅರ್ಹ ಫಲಾಪೇಕ್ಷಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ನ.02 ಆಗಿರುತ್ತದೆ (ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆಯ ದಿನಾಂಕ ಇರುವುದಿಲ್ಲ).
*ಯೋಜನೆಗಳು:* ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (ಹೊಸತು, ನವೀಕರಣ), ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಆರ್ಥಿಕ ನೆರವು, ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ (ವಾಣಿಜ್ಯ ಬ್ಯಾಂಕ್‍ಗಳ ಸಹಯೋಗದೊಂದಿಗೆ).
*ಅರ್ಹತೆಗಳು:* ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಅರ್ಜಿದಾರರ ಹೆಸರು, ಆಧಾರ್ ಕಾರ್ಡ್, ಜಾತಿ/ಆದಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಆಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ. ನಿಗಮದ/ಸರ್ಕಾರದ ಯಾವುದಾದರೂ ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು. ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಸರ್ಕಾರ/ನಿಗಮವು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆ/ ನಿಬಂಧನೆಗಳನ್ನು ಹೊಂದಿದವರಾಗಿರಬೇಕು. ಸರ್ಕಾರ ಮತ್ತು ನಿರ್ದೇಶಕ ಮಂಡಳಿ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯ ಬಯಸುವವರು ಸಹ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
*ವಿಶೇಷ ಸೂಚನೆ:* ಅನುದಾನದ ಲಭ್ಯತೆಗೆ ಅನುಗುಣವಾಗಿ ಯೋಜನೆಯನ್ನು/ ಸೌಲಭ್ಯವನ್ನು ಜಾರಿಗೊಳಿಸಲಾಗುವುದು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ, ಆ ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಗರದ ಶ್ರೀ ಕುಮಾರಸ್ವಾಮಿ ದೇವಸ್ಥಾನ ಎದುರು, ಕ್ಲಬ್ ರೋಡ್‍ನ ವೀರನಗೌಡ ಕಾಲೋನಿಯ ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂ.08392-267038ಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಭೀಮಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ