ಸೋಮವಾರ, ಅಕ್ಟೋಬರ್ 9, 2023
ಬೀಡಿ, ಸಿಗರೇಟ್ ಬಳಕೆ ತಡೆಯುವುದರ ಮೂಲಕ ಆರೋಗ್ಯ ಕಾಳಜಿ ಮೂಡಿಸಿ: ಮೇಯರ್ ಡಿ.ತ್ರಿವೇಣಿ
ಬಳ್ಳಾರಿ,ಅ.09(ಕರ್ನಾಟಕ ವಾರ್ತೆ):
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಬೀಡಿ ಸೇವನೆಯನ್ನು ಸಂಪೂರ್ಣವಾಗಿ ತಡೆಯುವುದರ ಮೂಲಕ ಸಾರ್ವಜನಿಕರ ಆರೋಗ್ಯದ ಕಾಳಜಿ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಡಿ.ತ್ರಿವೇಣಿ ಅವರು ಹೇಳಿದರು.
ಸಿಗರೇರೇಟ್, ಬೀಡಿ ಸೇದುವವರಿಗಿಂತ ಅವರ ಸುತ್ತಲಿನ ಜನತೆಗೆ ಹೆಚ್ಚಿನ ಆರೋಗ್ಯದ ಹಾನಿ ಆಗುವ ಸಾಧ್ಯತೆಗಳಿರುತ್ತವೆ. ವಿಶೇಷವಾಗಿ ಬಾಯಿ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್‍ನೊಂದಿಗೆ ಇತರೆ ಅವಯವಗಳು ಹಾನಿಗೀಡಾಗುವ ಹಿನ್ನಲೆಯಲ್ಲಿ ಜನತೆಯು ಸ್ವಯಂ ಪ್ರೇರಣೆಯಿಂದ ತಂಬಾಕು ಉತ್ಪನ್ನಗಳ ಬಳಕೆಯಿಂದ ದೂರ ಉಳಿಯುವಂತೆ ಅವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಪರವಾನಿಗಿ ನೀತಿ ಮತ್ತು ಕೋಟ್ಪ 2003 ಕಾಯ್ದೆಯ ಅನುಷ್ಠಾನ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಪಾಲಿಕೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಾಣಿಜ್ಯ ಬೆಳೆಯಾಗಿರುವ ತಂಬಾಕು ಉತ್ಪನ್ನವು 4000 ರಾಸಾಯನಿಕಗಳನ್ನು ಹೊಂದಿದ್ದು, ಅನಿಯಮಿತ ಸೇವನೆಯಿಂದ ವ್ಯಕ್ತಿಯ ದೇಹದ ಎಲ್ಲಾ ಅಂಗಗಳು ಹಾನಿಯಾಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವವರಿಗೆ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಲಾಗುತ್ತಿದೆ. ಜೊತೆಗೆ ಮಾರಾಟಗಾರರು ಪರವಾನಿಗೆ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಅವರು ಪ್ರಾಸ್ತಾವಿಕ ಮಾತನಾಡಿ, ಎಲ್ಲಾ ಶಾಲಾ ಕಾಲೇಜುಗಳಲ್ಲಿ ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿಯನ್ನು ನೀಡಲಾಗುತ್ತಿದೆ. ಪ್ರಮುಖವಾಗಿ ಹೋಟೆಲ್‍ಗಳು, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್‍ಗಳನ್ನು ಸ್ಥಾಪಿಸಲು ಸ್ಥಳೀಯ ಆಡಳಿತಗಳ ಸಹಕಾರ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಜಿಲ್ಲಾ ಆಸ್ಪತ್ರೆ ಕೋಣೆ ಸಂ-43ರಲ್ಲಿ ತಂಬಾಕು ವ್ಯಸನಿಗಳಿಗಾಗಿ ತಂಬಾಕು ವ್ಯಸನ ಮುಕ್ತ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಉಚಿತ ಆಪ್ತ ಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸೆ ಸೇವೆಯನ್ನು ನೀಡಲಾಗುತ್ತಿದೆ, ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಂಡು ತಂಬಾಕು ರಹಿತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ಮೇಯರ್ ಬಿ.ಜಾನಕಿ, ಆರೋಗ್ಯ ಮತ್ತು ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷೆ ಎನ್.ಎಮ್.ಡಿ ಆಸಿಫ್‍ಭಾಷ, ಪಾಲಿಕೆ ಆಯುಕ್ತರಾದ ಜಿ.ಖಲೀಲ್‍ಸಾಬ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ವಿಭಾಗೀಯ ಎನ್.ಟಿ.ಸಿ.ಪಿ ಸಂಯೋಜಕ ಮಹಾಂತೇಶ್ ಬಿ.ಉಳ್ಳಗಡ್ಡಿ, ಪರಿಸರ ಅಭಿಯಂತರರು ಶ್ರೀನಿವಾಸ್, ಡಿ.ಎಚ್.ಇ.ಒ ಈಶ್ವರ್ ಹೆಚ್ ದಾಸಪ್ಪನವರ, ಆಪ್ತಸಮಾಲೋಚಕರಾದ ಎಸ್.ಭೋಜರಾಜ, ಎಸ್.ಮಲ್ಲೇಶಪ್ಪ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ