ಸೋಮವಾರ, ಅಕ್ಟೋಬರ್ 2, 2023
ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ಕರೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ
ಬಳ್ಳಾರಿ,ಅ.02(ಕರ್ನಾಟಕ ವಾರ್ತೆ):
ಜಗತ್ತು ಕಂಡ ಮಹಾ ಶಾಂತಿಧೂತ ಹಾಗೂ ಅಹಿಂಸಾವಾದಿ ಮಹಾತ್ಮ ಗಾಂಧೀಜಿ ಅವರ ಜೀವನ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಹೇಳಿದರು.
ಇಂದು, ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿಯವರ 154ನೇ ಜಯಂತ್ಯೋತ್ಸವ (ಗಾಂಧೀಜಿ ತತ್ವ ಸಂದೇಶ ಕುರಿತು ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವಿಶ್ವದ ಶಾಂತಿ ಸಾಧಕ ಅಗ್ರಗಣ್ಯರಲ್ಲಿ ಪ್ರಮುಖರು, ಇಡೀ ಜಗತ್ತೇ ನಿಬ್ಬೆರಗಾಗುವಂತೆ ಇನ್ನೊಬ್ಬರಿಗಾಗಿ ತಮ್ಮ ಬದುಕನ್ನು ಸವೆಸಿದ ಗಾಂಧೀಜಿಯವರನ್ನು ಹಾಗೂ ಅವರ ವಿಚಾರಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವುದು, ದಾಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
“ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವ ನಾಣ್ಣುಡಿಯಂತೆ ನಮ್ಮ ಭವಿಷ್ಯದ ನಾಗರೀಕರಾಗಿರುವ ಮಕ್ಕಳಲ್ಲಿ ವಿಶ್ವದ ಶಾಂತಿದೂತ ಗಾಂಧೀಜಿಯವರ ತತ್ವ-ಆದರ್ಶ ಸೇರಿದಂತೆ ಅವರ ಜೀವನದ ಕುರಿತು ಅರಿವು ಮೂಡಿಸುವ ಪ್ರಬಂಧ ಸ್ಪರ್ಧೆ ಕಾರ್ಯಕ್ರಮ ಈ ವರ್ಷದಿಂದ ಆರಂಭವಾಗಿದ್ದು, ಪ್ರತಿ ಮನೆ-ಮನಕ್ಕೂ ಗಾಂಧೀಜಿಯವರ ಚಿಂತನೆಗಳು ತಲುಪಬೇಕು ಎನ್ನುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಾತ್ಮ ಗಾಂಧೀಜಿ ಅವರು ಬಳ್ಳಾರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅವರು ಧುಮುಕುವ ಮುನ್ನಾ ದೇಶದ್ಯಾಂತ ಸಂಚರಿಸಿ, ಜನಸಾಮಾನ್ಯರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಅದರಂತೆ, ಅವರು 1921ರ ಅ.01ರಂದು ಪ್ರಥಮ ಬಾರಿಗೆ ಬಳ್ಳಾರಿಗೆ ಭೇಟಿ ನೀಡಿದ್ದರು, ಆ ಸಂದರ್ಭದಲ್ಲಿ ಬಳ್ಳಾರಿ ರೈಲು ನಿಲ್ದಾಣದಲ್ಲಿ ಒಂದು ರಾತ್ರಿ ನಿದ್ರಿಸಿ ಮರು ದಿನ ಧಾರವಾಡಕ್ಕೆ ಪ್ರಯಾಣಿಸಿದುದ್ದನ್ನು ನಾವು ಸ್ಮರಿಸಬಹುದಾಗಿದೆ ಎಂದರು.
ಬಾಪೂಜಿಯವರು, 1934ರ ಮಾ.03ರಂದು ಸ್ವಾತಂತ್ರ್ಯದ ಹೋರಾಟಕ್ಕಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಣೆಗಾಗಿ ಎರಡನೇ ಬಾರಿ ಬಳ್ಳಾರಿಗೆ ಆಗಮಿಸಿದ್ದರು ಹಾಗೂ ಇಲ್ಲಿಂದ ಸಂಡೂರಿಗೆ ಸಹ ಪ್ರಯಾಣಿಸಿ, ಅಲ್ಲಿರುವ ಹರಿಜನರಿಗೆ ಕುಮಾರಸ್ವಾಮಿ ದೇವಸ್ಥಾನದ ಪ್ರವೇಶಕ್ಕೆ ಅಂದಿನ ಘೋರ್ಪಡೆ ರಾಜಮನೆತನ ಅವಕಾಶ ನೀಡಿದ್ದ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಿದ್ದರು. ಆ ವೇಳೆ ಸಂಡೂರಿನ ಬೆಟ್ಟಗುಡ್ಡಗಳ ಹಸಿರನ್ನು ನೋಡಿ ನಮ್ಮ ಸಂಡೂರಿನ ಪರಿಸರ ಕುರಿತು “ಸೆಪ್ಟೆಂಬರ್‍ನಲ್ಲಿ ಸಂಡೂರು ನೋಡು” ಎಂದು ಶ್ಲಾಘಿಸಿದ್ದರು ಎಂದು ಸಚಿವರು ಸ್ಮರಿಸಿದರು.
ಎರಡನೇ ಬಾರಿ ಬಳ್ಳಾರಿಗೆ ಬಂದಿದ್ದ ಸಂದರ್ಭದಲ್ಲಿ ಅಂದಿನ ಮುಸ್ಲಿಂ ಮುಖಂಡ ಶರಾಫ್ ಅವರ ಮನೆಯಲ್ಲಿ ತಂಗಿ ತದನಂತರ ದಾವಣಗೆರೆಗೆ ಪ್ರಯಾಣ ಬೆಳಿಸಿದ್ದರು. ಅವರ ಮರಣದ ನಂತರ ಅವರ ಚಿತಾಭಸ್ಮವನ್ನು ಅಖಂಡ ಬಳ್ಳಾರಿಯಾಗಿದ್ದ ಸಂದರ್ಭದಲ್ಲಿ ಕೂಡ್ಲಿಗಿ ತಾಲ್ಲೂಕಿನಲ್ಲಿ ಅಂದಿನ ಗಾಂಧಿವಾದಿಗಳು ತಂದು ಸ್ಮಾರಕವನ್ನು ನಿರ್ಮಿಸಿರುವುದು ನಮ್ಮ ಬಳ್ಳಾರಿಯ ಹೆಮ್ಮೆಯಾಗಿದೆ ಎಂದರು.
ಇದಕ್ಕೂ ಮುಂಚೆ ಸಚಿವರು, ಗಣ್ಯರೆಲ್ಲರೂ ಸೇರಿ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಮಂತ್ರಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಗಾಂಧಿಭವನದ ಕಾರ್ಯದರ್ಶಿ ಟಿ.ಜಿ.ವಿಠ್ಠಲ್ ಅವರು ಮಹಾತ್ಮ ಗಾಂಧೀಜಿ ಅವರ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಡಿಯಪ್ಪ.ಜಿ ಅವರು ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡಿದರು.
*ಬಹುಮಾನ ವಿಜೇತರು:*
*ಪ್ರೌಢಶಾಲೆ ವಿಭಾಗ:* ಪ್ರಥಮ-ವೀಣಾ(ಕೆ.ಪಿ.ಎಸ್ ಶಾಲೆ), ದ್ವಿತೀಯ-ಚೈತ್ರ ಯು(ಸರಕಾರಿ ಶಾಲೆ, ತೋರಣಗಲ್ಲು), ತೃತೀಯ-ಪ್ರಾರ್ಥನಾ (ಆದರ್ಶ ವಿದ್ಯಾಲಯ, ಬಳ್ಳಾರಿ).
*ಪಿಯು ಕಾಲೇಜು:* ಪ್ರಥಮ-ಸುಮ.ಕೆ(ಸರ್ಕಾರಿ ಪದವಿ ಪೂರ್ವ ಕಾಲೇಜು ಬಳ್ಳಾರಿ), ದ್ವಿತೀಯ-ಕಾರ್ತಿಕ.ಪಿ(ವಾಡ್ರ್ಲಾ ಸಂಯುಕ್ತ ಕಾಲೇಜು ಬಳ್ಳಾರಿ), ತೃತೀಯ-ವಿದ್ಯಾಶ್ರೀ ಎಸ್.ಗೌಡರ(ಸರ್ಕಾರಿ ಪದವಿ ಪೂರ್ವ ಕಾಲೇಜು ಬಳ್ಳಾರಿ).
*ಪದವಿ/ಸ್ನಾತಕೋತ್ತರ ವಿಭಾಗ:* ಪ್ರಥಮ-ಅರ್ಪಿತ.ಬಿ(ಅಲ್ಲಂ ಸುಮಂಗಳಮ್ಮ `ಸ್ಮಾರಕ ಮಹಿಳಾ ವಿಶ್ವವಿದ್ಯಾಲಯ ಬಳ್ಳಾರಿ), ದ್ವಿತೀಯ-ಎಲ್.ವಿನೋದ ನಾಯಕ(ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ), ತೃತೀಯ-ಪರಮೇಶ(ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ).
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದ ಡಾ.ಸೈಯದ್ ನಾಸೀರ್ ಹುಸೇನ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ವಕ್ಫ್‍ಬೋರ್ಡ್ ಅಧ್ಯಕ್ಷ ಹೂಮಾಯೂನ್ ಖಾನ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)























ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ